ನವದೆಹಲಿ: 22 ಭಾರತೀಯರಿದ್ದ ಮತ್ತೊಂದು ಭಾರತೀಯ ವ್ಯಾಪಾರಿ ಹಡಗಿನ ಮೇಳೆ ದಾಳಿಯಾಗಿದ್ದು, ವಿಚಾರ ತಿಳಿದ ಕೂಡಲೇ ಭಾರತೀಯ ನೌಕಾಪಡೆ ರಕ್ಷಣೆಗೆ ದೌಡಾಯಿಸಿದೆ.
ಗಲ್ಫ್ ಆಫ್ ಏಡನ್‌ನಲ್ಲಿ ಕ್ಷಿಪಣಿ ದಾಳಿಯಾಗಿದ್ದು, ವ್ಯಾಪಾರಿ ಹಡಗಿನ SOS ಕರೆಗೆ ಸ್ಪಂದಿಸಿದ ಭಾರತೀಯ ಸೇನೆ ತುರ್ತಾಗಿ ಯುದ್ಧನೌಕೆಯನ್ನು ರವಾನಿಸಿದೆ. ಮೂಲಗಳ ಪ್ರಕಾರ ವ್ಯಾಪಾರಿ ನೌಕೆಯಲ್ಲಿ 22 ಭಾರತೀಯರು ಮತ್ತು ಒಬ್ಬ ಬಾಂಗ್ಲಾದೇಶಿ ಇದ್ದರು ಎನ್ನಲಾಗಿದೆ.
ಕ್ಷಿಪಣಿ ದಾಳಿ ಕುರಿತು INS ವಿಶಾಖಪಟ್ಟಣಂಗೆ ಮಾಹಿತಿ ಬಂದ ಕೂಡಲೇ ಕರೆಗೆ ಸ್ಪಂದಿಸಿದ್ದು, ಐಎನ್‌ಎಸ್ ವಿಶಾಖಪಟ್ಟಣಂ ಕಾರ್ಗೋ ಹಡಗಿನಲ್ಲಿ ಅಗ್ನಿಶಾಮಕ ಕಾರ್ಯಕ್ಕೆ ಸಹಾಯ ಮಾಡುತ್ತಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
“ಭಾರತೀಯ ನೌಕಾಪಡೆಯು ಸ್ಥಿರವಾಗಿದ್ದು, ವ್ಯಾಪಾರಿ ಹಡಗುಗಳನ್ನು ರಕ್ಷಿಸಲು ಮತ್ತು ಸಮುದ್ರದಲ್ಲಿ ಜೀವನದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ” ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ರೇಲ್-ಹಮಾಸ್ ಸಂಘರ್ಷದ ಮಧ್ಯೆ ಹೌತಿ ಉಗ್ರಗಾಮಿಗಳು ಕೆಂಪು ಸಮುದ್ರದಲ್ಲಿ ವ್ಯಾಪಾರಿ ಹಡಗುಗಳ ಮೇಲೆ ನಿರಂತರವಾಗಿ ದಾಳಿಗಳನ್ನು ನಡೆಸುತ್ತಿದ್ದು, ಈ ಭೀತಿ ನಡುವೆಯೇ ಕ್ಷಿಪಣಿ ದಾಳಿ ನಡೆದಿದೆ.
ಈ ಹಿಂದೆ 21 ಭಾರತೀಯ ಸಿಬ್ಬಂದಿಗಳಿದ್ದ ಲೈಬೀರಿಯನ್ ಧ್ವಜದ MV ಕೆಮ್ ಪ್ಲುಟೊ ವ್ಯಾಪಾರಿ ಹಡಗಿನ ಮೇಲೆ ಡಿಸೆಂಬರ್ 23 ರಂದು ಭಾರತದ ಪಶ್ಚಿಮ ಕರಾವಳಿಯಲ್ಲಿ ಡ್ರೋನ್ ದಾಳಿ ನಡೆದಿತ್ತು. MV ಕೆಮ್ ಪ್ಲುಟೊ ಅಲ್ಲದೆ, ಭಾರತಕ್ಕೆ ತೆರಳುತ್ತಿದ್ದ ಮತ್ತೊಂದು ವಾಣಿಜ್ಯ ತೈಲ ಟ್ಯಾಂಕರ್ ಅದೇ ದಿನ ದಕ್ಷಿಣ ಕೆಂಪು ಸಮುದ್ರದಲ್ಲಿ ಶಂಕಿತ ಡ್ರೋನ್ ದಾಳಿಗೆ ಒಳಗಾಗಿತ್ತು. ಈ ನೌಕೆಯಲ್ಲಿ 25 ಭಾರತೀಯ ಸಿಬ್ಬಂದಿಯ ತಂಡವಿತ್ತು.