ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಉಡುಪಿ: ಜಿಲ್ಲಾಡಳಿತದಿಂದ 75ನೇ ಗಣರಾಜ್ಯೋತ್ಸವ ಆಚರಣೆ – ಉಸ್ತುವಾರಿ ಸಚಿವೆಯಿಂದ ಧ್ವಜರೋಹಣ
ಉಡುಪಿ:ಜ 26: ಉಡುಪಿ ಜಿಲ್ಲಾಡಳಿತದ ವತಿಯಿಂದ 75ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಧ್ವಜರೋಹಣ ನಡೆಸಿ ಗೌರವವಂದನೆ ಸ್ವೀಕರಿಸಿದರು.
ಈ ಬಗ್ಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, 1950 ಜನವರಿ 26 ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಅಂದು ಸ್ವತಂತ್ರ ಭಾರತಕ್ಕೆ ತನ್ನದೇ ಆದ ಒಂದು ಸಂವಿಧಾನವನ್ನು ಅನುಷ್ಠಾನಕ್ಕೆ ತಂದ ದಿನ. ಭಾರತದ ಸ್ವಾತಂತ್ರ‍್ಯ ಚಳುವಳಿಯಲ್ಲಿ ಜನವರಿ 26, 1929 ರಂದು ಭಾರತದ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯದ ಧ್ಯೇಯವನ್ನು ಹಾಕಿಕೊಂಡಿತು. ಲಾಹೋರ್‌ನಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡ ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಲಾಯಿತು. ಈ ಕಾರಣಕ್ಕಾಗಿ ಸ್ವಾತಂತ್ರ‍್ಯ ನಂತರದ ಭಾರತದ ಸಂವಿಧಾನವನ್ನು ಈ ದಿನದಂದು ಜಾರಿಗೆ ತರಲಾಯಿತು ಎಂದರು.
ಇನ್ನು ಡಾ. ಬಿ.ಆರ್ ಅಂಬೇಡ್ಕರ್‌ರವರು ತಮ್ಮ ಅನುಭವ ಜ್ಞಾನ, ಅಧ್ಯಯನ, ದೂರದೃಷ್ಟಿಯ ಒಳನೋಟಗಳಿಂದ ಸಮಾಜದ ಎಲ್ಲಾ ಶೋಷಿತ ಜನ ಸಮುದಾಯದ ಏಳಿಗೆಗೆ, ಸಹಬಾಳ್ವೆಯಿಂದ ಮುಖ್ಯ ವಾಹಿನಿಗೆ ಬಂದು ಎಲ್ಲರಂತೆ ಬದುಕುವ ಅವಕಾಶಗಳನ್ನು ಕಲ್ಪಿಸುವ ಶ್ರೇಷ್ಠ ಸಂವಿಧಾನವನ್ನು ರಚಿಸಿ ಈ ಮೂಲಕ ಮಾನವತೆಯ ಉಳಿವು ಏಳಿಗೆ ಹಾಗೂ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ. ನಮ್ಮ ಸಂವಿಧಾನವು ನಮಗೆ ಮುಕ್ತ, ಪ್ರಜಾಪ್ರಭುತ್ವ, ರಾಷ್ಟ್ರದ ನಾಗರಿಕ ಹಕ್ಕುಗಳನ್ನು ನೀಡಿದೆ ಆದರೆ ನಮ್ಮ ಪ್ರಜಾಪ್ರಭುತ್ವದ ಕೇಂದ್ರ ತತ್ವಗಳಾದ ನ್ಯಾಯ, ಸ್ವಾತಂತ್ರ, ಸಮಾನತೆ ಮತ್ತು ಭಾತೃತ್ವವನ್ನು ಯಾವಾಗಲೂ ಅನುಸರಿಸುವ ಜವಾಬ್ದಾರಿಯನ್ನು ನಮ್ಮ ಮೇಲೆ ಇರಿಸಿದೆ. ನಮ್ಮ ರಾಷ್ಟ್ರಪಿತ ಗಾಂಧೀಜಿಯವರ ಜೀವನ ಮತ್ತು ಮೌಲ್ಯಗಳನ್ನು ನಾವು ಮನಸ್ಸಿನಲ್ಲಿಟ್ಟುಕೊಂಡರೆ ಈ ಸಂವಿಧಾನಿಕ ಆದರ್ಶಗಳನ್ನು ಅನುಸರಿಸಲು ನಮಗೆ ಸುಲಭವಾಗುತ್ತದೆ ಎಂದಿದ್ದಾರೆ.
ಇಂದು ನಾವು ಉತ್ಸಾಹದಿಂದ ಆಚರಿಸುತ್ತಿರುವ ಗಣರಾಜ್ಯೋತ್ಸವದ ರಾಷ್ಟ್ರೀಯ ಹಬ್ಬ, ರಾಷ್ಟ್ರಧ್ವಜದ ಮೇಲಿನ ನಮ್ಮ ಗೌರವವನ್ನು ಮತ್ತು ಸಂವಿಧಾನದ ಮೇಲಿನ ನಂಬಿಕೆಯನ್ನು ವ್ಯಕ್ತಪಡಿಸುತ್ತದೆ. ನಮ್ಮ ದೇಶದ ಆರ್ಥಿಕತೆಯು ವಿಶ್ವದಲ್ಲಿ ನಾಲ್ಕನೆಯ ಸ್ಥಾನ ಪಡೆದಿದ್ದು, ಸಾಕ್ಷರತೆ ಪ್ರಮಾಣವು ನಾಲ್ಕು ಪಟ್ಟಿಗಿಂತ ಹೆಚ್ಚಾಗಿರುತ್ತದೆ, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿ ಆಹಾರ ಧಾನ್ಯದ ನಿವ್ವಳ ರಪ್ತುದಾರರಾಗಿದ್ದೇವೆ. ಬಡತನ ಪ್ರಮಾಣದಲ್ಲಿ ಗಮನಾರ್ಹ ಇಳಿಕೆ ಸಾಧಿಸಿ, ಶ್ವೇತ ಕ್ರಾಂತಿಯು ನಮ್ಮನ್ನು ವಿಶ್ವದ ಅತಿದೊಡ್ಡ ಹಾಲು ಉತ್ಪಾದಿಸುವ ರಾಷ್ಟ್ರವನ್ನಾಗಿ ಮಾಡಿದೆ. ವಿಶ್ವದಲ್ಲಿ ವೈಜ್ಞಾನಿಕವಾಗಿ ಹಾಗೂ ತಾಂತ್ರಿಕವಾಗಿ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಿದ್ದೇವೆ. ನಮ್ಮ ವಿಜ್ಞಾನಿಗಳ ಸಾಧನೆ ವಿಶ್ವವೇ ತಿರುಗಿ ನೋಡುವಂತೆ ಮಾಡಿ ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದೆ. ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಕಳಿಸಿ, ಅಧ್ಯಯನ ಪ್ರಾರಂಭಿಸಿದ್ದಾರೆ ಹಾಗೂ ಚಂದ್ರಯಾನ-3 ಮಿಷನ್ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸುವುದರೊಂದಿಗೆ ಅದರ ಕಾರ್ಯವನ್ನು ಪ್ರಾರಂಭಿಸಿದೆ. ಈ ಕಾರ್ಯ ಮುಂದಿನ ದಿನಗಳಲ್ಲಿ ಮತ್ತಷ್ಟು ವೇಗವನ್ನು ಪಡೆಯಲಿದೆ ಬಾಹ್ಯಕಾಶ ಯಾನ ಕಾರ್ಯಕ್ರಮಗಳನ್ನು ರಾಷ್ಟ್ರವು ಉತ್ಸುಕತೆಯಿಂದ ಎದುರು ನೋಡುತ್ತಿದೆ ಎಂದರು.
ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ನಮ್ಮ ಗಡಿ ಕಾಯುವ ಹಾಗೂ ದೇಶಕ್ಕಾಗಿ ಯಾವುದೇ ತ್ಯಾಗಕ್ಕಾಗಿ ಸಿದ್ಧರಾಗಿರುವ ನಮ್ಮ ಯೋಧರಿಗೆ, ಕರ್ತವ್ಯದ ಸಾಲಿನಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಸೈನಿಕರಿಗೆ ಅರೆಸೇನಾ ಹಾಗೂ ಪೊಲೀಸ್ ಪಡೆಗಳ ಎಲ್ಲಾ ಧೈರ್ಯ ಶಾಲಿಗಳಿಗೆ ನಾನು ವಂದಿಸುತ್ತೇನೆ.ದೇಶದಲ್ಲಿ ಯಾವುದೇ ದುಷ್ಟ ಶಕ್ತಿಗಳು ತಲೆ ಎತ್ತದಂತೆ ಮಾಡುವುದರ ಜೊತೆಗೆ ಸರ್ವ ಧರ್ಮಗಳನ್ನು ಗೌರವಿಸಿ ಯಾವುದೇ ಕೋಮು ಗಲಭೆಗಳಿಗೆ ಅವಕಾಶಕೊಡದೇ ಸರ್ವ-ಧರ್ಮ ಸಮನ್ವಯ ಭಾವ ಬೆಳೆಸಿಕೊಂಡು ಹೋಗಲು ನಾವೆಲ್ಲರೂ ಇಂದು ಪ್ರತಿಜ್ಞೆ ಮಾಡಬೇಕಾಗಿದೆ. ನಾವು ಕಳೆದ ವಿಧಾನಸಭಾ ಚುನಾವಣೆ ವೇಳೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾದ ಪಂಚಗ್ಯಾರಂಟಿಗಳ ಭರವಸೆಯಂತೆ ಈಗಾಗಲೇ ಐದು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದರೊಂದಿಗೆ ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ರಾಜ್ಯ ಸರ್ಕಾರದ ಯೋಜನೆಗಳು ಸರ್ವರಿಗೂ ಅನುಕೂಲವಾಗುವಂತಿರಬೇಕು ಎಂಬ ದೃಷ್ಠಿಯಿಂದ ಐದು ಗ್ಯಾರಂಟಿ ಯೋಜನೆಗಳನ್ನು ಜಾತಿ, ಧರ್ಮ, ಲಿಂಗಬೇಧಗಳಿಲ್ಲದೇ ಸರ್ವರಿಗೂ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧತೆ ಮೆರೆಯಲಿದೆ. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗುವ ನೈಪುಣ್ಯತೆಯನ್ನು ಜನರು ಬೆಳೆಸಿಕೊಳ್ಳಬೇಕು. ಮುಖ್ಯಮಂತ್ರಿ ಸಿದ್ಧರಾಮಯ್ಯ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಯಶಸ್ಸು ಹೆಮ್ಮೆಯ ಸಂಗತಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ 2 ಲಕ್ಷದ 16 ಸಾವಿರ ಜನ ನೋಂದಾಣಿಯಾಗಿದ್ದು 2 ಲಕ್ಷದ 2 ಸಾವಿರ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶಕ್ತಿ ಯೋಜನೆ ಯೋಜನೆಯಡಿ 71 ಲಕ್ಷದ 32 ಸಾವಿರ ಮಹಿಳಾ ಪ್ರಯಾಣಿಕರು ಪ್ರಯೋಜನ ಪಡೆದಿದ್ದಾರೆ. ರೂ.26.59 ಕೋಟಿಯನ್ನು ಸರ್ಕಾರದಿಂದ ಭರಿಸಲಾಗಿದೆ ಎಂದಿದ್ದಾರೆ.
ಗೃಹಜ್ಯೋತಿ ಯೋಜನೆಯಡಿ 48 ಯೂನಿಟ್ ಗಿಂತ ಕಡಿಮೆ ಬಳಸುವ ಗ್ರಾಹಕರಿಗೆ ಹೆಚ್ಚುವರಿ 10 ಅರ್ಹತಾ ಯೂನಿಟ್ ವಿದ್ಯುತ್ ಒದಗಿಸಲಾಗುವುದು, ಜಿಲ್ಲೆಯಲ್ಲಿ 3 ಲಕ್ಷದ 12 ಸಾವಿರ ಜನ ನೋಂದಾಯಿಸಿಕೊಂಡಿದ್ದು, ಈವರೆಗೆ ರೂ.77 ಕೋಟಿಯನ್ನು ಸರ್ಕಾರದಿಂದ ಭರಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 28 ಸಾವಿರ ಅಂತ್ಯೋದಯ ಕಾರ್ಡ್ ಹಾಗೂ 1 ಲಕ್ಷದ 68 ಸಾವಿರ ಆದ್ಯತಾ ಪಡಿತರ ಚೀಟಿ ಸೇರಿ 6 ಲಕ್ಷದ 2 76 ಸಾವಿರ ಫಲಾನುಭವಿಗಳಿದ್ದು, ಪ್ರತಿಯೊಬ್ಬರಿಗೂ 5 ಕೆ.ಜಿ ಆಹಾರ ಧಾನ್ಯದ ಬದಲಾಗಿ ಈವರೆಗೆ ರೂ.73 ಕೋಟಿ ಮೊತ್ತವನ್ನು ಪಾವತಿಸಲಾಗಿದೆ. ರಾಜ್ಯಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿಗೆ ರಾಜ್ಯಾದ್ಯಂತ 1 ಲಕ್ಷದ 4 ಸಾವಿರ ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 1781 ಜನ ಅರ್ಹ ಫಲಾನುಭವಿಗಳ ನೋಂದಣಿಯಾಗಿದೆ. ಇವರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ.
ರಾಜ್ಯದಾದ್ಯಂತ ತೀವ್ರ ಮಳೆಯ ಕೊರತೆಯಿಂದಾಗಿ ಬರಗಾಲದ ಛಾಯೆ ಆವರಿಸಿದೆ. ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಿದ್ದು, ಈ ಜಿಲ್ಲೆಯ ಮೂರು ತಾಲೂಕುಗಳಲ್ಲೂ ಬರದ ಛಾಯೆ ಆವರಿಸಿದ್ದು, ಜಿಲ್ಲೆಯ ಹೆಬ್ರಿ, ಬ್ರಹ್ಮಾವರ ಹಾಗೂ ಕಾರ್ಕಳ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಈಗಾಗಲೇ ಸೇರಿಸಲಾಗಿದೆ. ಬರ ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ದವಾಗಿದ್ದು, ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರಿ ಅಧಿಕಾರಿಗಳು ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಸರ್ಕಾರದ ನಾನಾ ಸೇವೆ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದು, ಜನರ ಸಮಸ್ಯೆಗಳನ್ನು ಸ್ಥಳೀಯವಾಗಿ ಜಿಲ್ಲಾ ಮಟ್ಟದಲ್ಲಿ ಬಗೆಹರಿಸಲು ಪ್ರಾರಂಭಿಸಿರುವ ಜನತಾ ದರ್ಶನಕ್ಕೆ ಜಿಲ್ಲೆಯಲ್ಲಿ ಈವರೆಗೆ 403 ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕೃತವಾಗಿದ್ದು, ಅವುಗಳಲ್ಲಿ 401 ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ತೆಯ ನಿರ್ಮಾಣ ಮತ್ತು ಉನ್ನತ್ತೀಕರಣ, ಒಳಚರಂಡಿ ಸಂಸ್ಕರಣ ಘಟಕಗಳ ದುರಸ್ಥಿ ಸೇರಿದಂತೆ ಗೃಹಾ ಸೇವಾ ಸಂಪರ್ಕಗಳನ್ನು ಒದಗಿಸಲು ರೂ.30 ಕೋಟಿ ಅನುದಾನ ಬಿಡುಗಡೆಯಾಗಿರುತ್ತದೆ.
ಉಡುಪಿ ಜಿಲ್ಲೆ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ವಕೀಲರ ಭವನ ಹಾಗೂ ಎ.ಡಿ.ಆರ್ ಸಂಕೀರ್ಣವನ್ನು ಒಳಗೊಂಡ ಅನೆಕ್ಸ್ ನ್ಯಾಯಾಲಯ ನಿರ್ಮಾಣಕ್ಕೆ ರೂ.15.14 ಕೋಟಿಗಳಿಗೆ ಅನುಮೋದನೆ ನೀಡಲಾಗಿದೆ ಎಂದರು.
ಇನ್ನು ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯ ಹಾಗೂ ವಸತಿ ಶಾಲೆಗಳಿಗೆ 6036 ವಿದ್ಯಾರ್ಥಿಗಳು ದಾಖಲಾಗಿ ಶಿಕ್ಷಣ ಸೇರಿದಂತೆ ಮೂಲ ಸೌಲಭ್ಯಗಳನ್ನು ಪಡೆಯುತ್ತಿದ್ದು, 2567 ವಿದ್ಯಾರ್ಥಿಗಳಿಗೆ ರೂ.1 ಕೋಟಿ 46 ಲಕ್ಷ ಶುಲ್ಕ ವಿನಾಯಿತಿ ಮಂಜೂರು ಮಾಡಲಾಗಿರುತ್ತದೆ. ಬಾರ್ಕೂರು ಹಾಗೂ ಕುಂದಾಪುರದಲ್ಲಿ ಹೊಸದಾಗಿ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ತಲಾ 5 ಕೋಟಿಗಳಂತೆ 10 ಕೋಟಿ ಗಳನ್ನು ಮಂಜೂರು ಮಾಡಲಾಗಿದೆ. ಮೀನುಗಾರಿಕೆಯಲ್ಲಿ ತೊಡಗಿರುವ ಯಾಂತ್ರೀಕೃತ ದೋಣಿಗಳಿಗೆ 73,808 ಕಿಲೋ ಲೀಟರ್ ಮಾರಾಟ ಕರರಹಿತ ಡೀಸೆಲ್, 5074 ಪರ್ಮಿಟ್ ಹೊಂದಿರುವ ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆಯನ್ನು, ಜೀವ ರಕ್ಷಕ ಕಿಟ್ಟುಗಳು ಸೇರಿದಂತೆ ಮೀನುಸಾಗಾಟ ವಾಹನಕ್ಕೆ ಸಹಾಯಧನ ಒದಗಿಸಲಾಗಿದೆ. ಜಿಲ್ಲೆಯ ಹೆಬ್ರಿ ತಾಲೂಕು ಕೆರೆಬೆಟ್ಟು, ಶಿವಪುರ ಗ್ರಾಮದಲ್ಲಿ 114 ಎಕ್ರೆ ಹಾಗೂ ಕಾರ್ಕಳದ ನಿಟ್ಟೆಯಲ್ಲಿ 51 ಎಕ್ರೆ ಜಮೀನಿನಲ್ಲಿ ಹೊಸ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಕಾಪು ತಾಲೂಕಿನ ಎಲ್ಲೂರು ಹಾಗೂ ಸಾಂತೂರು ಗ್ರಾಮದಲ್ಲಿ 942 ಎಕ್ರೆ ಸ್ಥಳ ಪರಿಶೀಲನೆ ಮಾಡಿ, ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಕೈಗಾರಿಕೆ ಸ್ಥಾಪನೆಯ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಿ, ಮುಂದಿನ ದಿನಗಳಲ್ಲಿ ಸ್ಥಳೀಯ ಜನರಿಗೆ ಉದ್ಯೋಗ ಲಭಿಸುವಂತೆ ಮಾಡಲು ಸೂಚನೆ ನೀಡಲಾಗಿದೆ. ಜಿಲ್ಲೆಯ ಸುಂದರ ಪ್ರಕೃತಿ ತಾಣಗಳು, ಕಡಲ ತೀರಗಳ ಧಾರ್ಮಿಕ ಕೇಂದ್ರಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರವಾಸಿಗರನ್ನು ಆಕರ್ಷಿಸಿದೆ. ಇಲ್ಲಿ ಆಗಮಿಸುವ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್.ಕೆ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಯಾಲ್, ಎಡಿಸಿ ಜಿ.ಎಸ್.ಮಮತಾ ದೇವಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.