ಬ್ಯಾರಿಕೇಡ್‌ಗಳನ್ನು ಮುರಿಯಲು ಪ್ರಚೋದನೆ; ರಾಹುಲ್ ವಿರುದ್ಧ ಪ್ರಕರಣ ದಾಖಲಿಸಲು ಡಿಜಿಪಿಗೆ ಸೂಚನೆ- ಅಸ್ಸಾಂ ಸಿಎಂ
ಗುವಾಹಟಿ: ಬ್ಯಾರಿಕೇಡ್ ಗಳನ್ನು ಮುರಿಯುವುದಕ್ಕೆ ಜನಸ್ತೋಮಕ್ಕೆ ಪ್ರಚೋದನೆ ನೀಡಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸುವುದಕ್ಕೆ ಡಿಜಿಪಿ ಜಿಪಿ ಸಿಂಗ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.
ಕಾಂಗ್ರೆಸ್ ನ ಯುವ ಘಟಕದ ಅಧ್ಯಕ್ಷ ಶ್ರೀನಿವಾಸ್ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಹಿಮಂತ ಬಿಸ್ವ ಶರ್ಮ ಈ ಮಾಹಿತಿ ಹಮ್ಮಿಕೊಂಡಿದ್ದಾರೆ.
ಶ್ರೀನಿವಾಸ್ ಅವರ ಹ್ಯಾಂಡಲ್ ನಲ್ಲಿದ್ದ ವೀಡಿಯೋಗಳನ್ನು ಸಾಕ್ಷ್ಯವನ್ನಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.
ಇವು ಅಸ್ಸಾಮಿ ಸಂಸ್ಕೃತಿಯ ಭಾಗವಲ್ಲ. ನಮ್ಮದು ಶಾಂತಿಯುತ ರಾಜ್ಯ. ಇಂತಹ ನಕ್ಸಲೀಯ ತಂತ್ರಗಳು ನಮ್ಮ ಸಂಸ್ಕೃತಿಗೆ ಸಂಪೂರ್ಣವಾಗಿ ಪರಕೀಯವಾಗಿವೆ ಎಂದು ಮುಖ್ಯಮಂತ್ರಿ, ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ವೇಳೆ ಉಂಟಾದ ಘರ್ಷಣೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
‘ನಿಮ್ಮ ಅಶಿಸ್ತಿನ ನಡವಳಿಕೆ ಮತ್ತು ಒಪ್ಪಿಗೆ ಸೂಚಿಸಿದ ಮಾರ್ಗಸೂಚಿಗಳ ಉಲ್ಲಂಘನೆಯು ಈಗ ಗುವಾಹಟಿಯಲ್ಲಿ ಭಾರಿ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದೆ’ ಎಂದು ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಮಂಗಳವಾರ ನಗರಕ್ಕೆ ಪ್ರವೇಶಿಸದಂತೆ ತಡೆಯಲಾಯಿತು, ಬ್ಯಾರಿಕೇಡ್‌ಗಳನ್ನು ಮುರಿದು ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯನ್ನು ಪ್ರಚೋದಿಸಿದರು. ನಂತರ ನಗರದ ಹೊರವಲಯದಲ್ಲಿ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಗಾಂಧಿ, “ನಾವು ಬ್ಯಾರಿಕೇಡ್‌ಗಳನ್ನು ಮುರಿದಿದ್ದೇವೆ, ಆದರೆ ಕಾನೂನನ್ನು ಮುರಿಯುವುದಿಲ್ಲ” ಎಂದು ಹೇಳಿದ್ದಾರೆ.