ಜ.22ಕ್ಕೆ ಬೆಂಗಳೂರು ದಕ್ಷಿಣದಲ್ಲಿ ಬಾಲರಾಮೋತ್ಸವ: ಲಕ್ಷ ದೀಪೋತ್ಸವ, ರಾಮನಾಮ ಭಜನೆ ಸಿದ್ಧತೆ
ಬೆಂಗಳೂರು: ಕೋಟ್ಯಾಂತರ ಜನರ ಬಹು ನರೀಕ್ಷೆಯ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗುವ ಜ.22ರಂದು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ವಿಶೇಷ ಬಾಲರಾಮೋತ್ಸವ ಹಮ್ಮಿಕೊಂಡಿರುವುದಾಗಿ ಸಂಸದ ತೇಜಸ್ವಿ ಸೂರ್ಯ ಅವರು ಶನಿವಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೀಪಾವಳಿ ಹಬ್ಬ ಪ್ರತಿವರ್ಷವೂ ಬರುತ್ತದೆ. ಆದರೆ ಜ.22ರಂದು ಬರುತ್ತಿರುವುದು 500 ವರ್ಷದ ನಂತರ ಬಂದಿರುವ ದೀಪಾವಳಿ. ಈ ದೀಪಾವಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸುಮಾರು 10 ಲಕ್ಷ ಜನರನ್ನು ವಿವಿಧ ಕಾರ್ಯಕ್ರಮಗಳ ಮೂಲಕ ತಲುಪಬೇಕೆಂಬ ಯೋಜನೆ ರೂಪಿಸಲಾಗಿದೆ. ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮೈದಾನ ಮತ್ತು ಬೃಹತ್ ದೇವಾಲಯದ ಆವರಣವನ್ನು ಗುರುತಿಸಿ ದೀಪೋತ್ಸವವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದ 100 ದೇವಾಲಯಗಳಲ್ಲಿ ಬೃಹತ್ ಎಲ್‌ಇಡಿ ಪರದೆ ಮೂಲಕ ಅಯೋಧ್ಯೆಯಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ಪ್ರತಿನಿಧಿಸುವ ಪದ್ಮನಾಭನಗರದ ಕಾರ್ಮೆಲ್ ಸ್ಕೂಲ್ ಮೈದಾನದಲ್ಲಿ ಬಾಲರಾಮೋತ್ಸವ ಎಂಬ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದಿನಪೂರ್ತಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 5 ರಿಂದ 8 ಗಂಟೆಯವರೆಗೆ ಸಂಗೀತ ದಿಗ್ಗಜರುಗಳಾದ ವಿಜಯಪ್ರಕಾಶ್, ಪ್ರವೀಣ್ ಡಿ.ರಾವ್, ಸಿದ್ಧಾರ್ಥ ಬೆಳ್ಮಣ್ಣು, ಡ್ರಮ್ ವಾದಕ ಅರುಣ್ ಇವರುಗಳಿಂದ ಶ್ರೀರಾಮನ ಭಜನೆ, ಸಂಕೀರ್ತನೆ ನಡೆಯಲಿದೆ. ರಾತ್ರಿ 8.30ಕ್ಕೆ ಲಕ್ಷ ದೀಪೋತ್ಸವದೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.