ಹುಬ್ಬಳ್ಳಿ: ಅಯೋಧ್ಯೆ ರಾಮಜನ್ಮಭೂಮಿ ಹೋರಾಟದ ಪ್ರಕರಣದಲ್ಲಿ ಆರೋಪಿಯಾಗಿರುವ ಕರಸೇವಕ ಶ್ರೀಕಾಂತ ಪೂಜಾರಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ.
ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಶ್ರೀಕಾಂತ್ ಪೂಜಾರಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ಡಿಸೆಂಬರ್ 29ರಂದು ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಿ ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಪ್ರಕರಣ ಮೂರನೇ ಆರೋಪಿಯಾಗಿರುವ ಶ್ರೀಕಾಂತ್ ವಿರುದ್ಧ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 143, 147, 436, 427 ಹಾಗೂ 149 ಅಡಿ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ಈ ಪ್ರಕರಣದ ಸಂಬಂಧ ಆರೋಪ ಪಟ್ಟಿಯನ್ನೂ ಸಲ್ಲಿಸಲಾಗಿತ್ತು.
1992ರಲ್ಲಿ ಅಯೋಧ್ಯೆ ಹೋರಾಟ ಸಂಬಂಧ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಾಟೆಯಲ್ಲಿ ಶ್ರೀಕಾಂತ್ ಪೂಜಾರಿ ಭಾಗಿಯಾಗಿದ್ದರು. ಈ ಹಿನ್ನೆಲೆ ಇತ್ತೀಚೆಗೆ ಬಂಧನ ಮಾಡಲಾಗಿತ್ತು. ಇದರಿಂದ ರಾಜ್ಯದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ವಿಪಕ್ಷ ನಾಯಕ ಆರ್ ಅಶೋಕ್ ಹುಬ್ಬಳ್ಳಿಗೆ ಭೇಟಿ ನೀಡುತ್ತಿದ್ದಂತೆ ಪ್ರತಿಭಟನೆ ಮತ್ತೊಂದು ಸ್ವರೂಪ ಪಡೆದಿತ್ತು. ಠಾಣೆ ಮುಂದೆ ಟೈರ್‌ಗೆ ಬೆಂಕಿ ಹಚ್ಚಿದ್ದ ಕಾರ್ಯಕರ್ತರು ಹಿಂಬದಿ ಗೇಟ್ನಿಂದ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು.