ಬಂಧಿತ ಶ್ರೀಕಾಂತ್ ಪೂಜಾರಿ ಕರಸೇವಕ ಅಲ್ಲ, ಆತನ ವಿರುದ್ಧ 16 ಪ್ರಕರಣಗಳಿವೆ: ಗೃಹ ಸಚಿವ ಪರಮೇಶ್ವರ
ಬೆಂಗಳೂರು: ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನವನ್ನು ಖಂಡಿಸಿ ರಾಜ್ಯಾದಾದ್ಯಂತ ಬಿಜೆಪಿ ಆರಂಭಿಸಿರುವ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು, ಆ ವ್ಯಕ್ತಿ ಕರಸೇವಕರಲ್ಲ ಮತ್ತು ಆತನ ವಿರುದ್ಧ 16 ಪೊಲೀಸ್ ಪ್ರಕರಣಗಳಿವೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಕಾಂತ್ ಪೂಜಾರಿ ಎಂಬ ವ್ಯಕ್ತಿಯನ್ನು ಪೊಲೀಸರು ದಾಖಲಿಸಿರುವ ಎಫ್‌ಐಆರ್ ಮತ್ತು ಇತರ ದಾಖಲೆಗಳಲ್ಲಿ ಕರಸೇವಕ ಎಂದು ಉಲ್ಲೇಖಿಸಿಲ್ಲ ಎಂದಿದ್ದಾರೆ.
‘ಆತ ಆರೋಪಿ ಸ್ಥಾನದಲ್ಲಿದ್ದು, ಆತನ ವಿರುದ್ಧ 16 ಪ್ರಕರಣಗಳಿವೆ. ಅವುಗಳಲ್ಲಿ ಕೆಲವು ಪ್ರಕರಣಗಳು ಹೊರ ಬಂದಿವೆ. ಕಾನೂನು ಪಾಲನೆ ಮಾಡದ ಹಾಗೂ 16 ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಯನ್ನು ಬೆಂಬಲಿಸುತ್ತಿರುವ ಪಕ್ಷ ಬಿಜೆಪಿಯಾಗಿದೆ. ಬಿಜೆಪಿಗೆ ಏನಾಗಿದೆಯೋ ಗೊತ್ತಿಲ್ಲ’ ಎಂದು ಹೇಳಿದರು.
‘ಹಳೆಯ ಪ್ರಕರಣಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದರಿಂದ ಅವುಗಳನ್ನು ಪರಿಶೀಲಿಸುವಾಗ ಪೂಜಾರಿ ಪ್ರಕರಣ ಬೆಳಕಿಗೆ ಬಂದಿತು. 31 ವರ್ಷಗಳ ನಂತರ ಏಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಬಿಜೆಪಿ ಸರ್ಕಾರದ ನಾಲ್ಕು ವರ್ಷಗಳ ಆಡಳಿತದಲ್ಲಿ ಅಥವಾ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಈ ಪ್ರಕರಣಗಳನ್ನು ಹಿಂಪಡೆಯಬಹುದಿತ್ತು. ಅವರೂ ಏನೂ ಮಾಡಿಲ್ಲ. ಯಾರನ್ನು ದೂಷಿಸಬೇಕು ಎಂಬುದು ಪ್ರಶ್ನೆಯಾಗಿದೆ’ ಎಂದು ಪರಮೇಶ್ವರ್ ತಿಳಿಸಿದರು.