ಭೂಕಂಪಕ್ಕೆ ಜಪಾನ್ ನಲ್ಲಿ ಕನಿಷ್ಠ 30 ಸಾವು, ಒಂದೇ ದಿನ 155 ಬಾರಿ ಕಂಪನ
ಟೋಕಿಯೋ: ಹೊಸ ವರ್ಷದ ಮೊದಲ ದಿನವೇ ಜಪಾನ್ ಗೆ ಪ್ರಕೃತಿ ಆಘಾತ ನೀಡಿದ್ದು, ಈಶಾನ್ಯ ಜಪಾನ್ ನಲ್ಲಿ ಪ್ರಬಲ ಭೂ ಕಂಪನ ಸಂಭವಿಸಿದ ಪರಿಣಾಮ ಕನಿಷ್ಟ 30 ಮಂದಿ ಸಾವನ್ನಪ್ಪಿದ್ದಾರೆ.
ವರ್ಷದ ಮೊದಲ ದಿನವಾದ ನಿನ್ನೆ ಜಪಾನ್ ನಲ್ಲಿ ಪ್ರಬಲ ಭೂಕಂಪನ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 7.4ರಿಂದ 7.6 ರವರೆಗೂ ಭೂಕಂಪನ ಸಂಭವಿಸಿದ್ದು, ಜಪಾನ್ ನ ಈಶಾನ್ಯ ಭಾಗದ ನನಾವೋ ನಲ್ಲಿ ಭೂ ಕಂಪನದ ಕೇಂದ್ರ ಬಿಂದು ವರದಿಯಾಗಿದೆ. ಈ ಕಂಪನದಲ್ಲಿ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದು, 32 ಸಾವಿರಕ್ಕೂ ಅಧಿಕ ಮಂದಿ ಕಂಪನದಿಂದ ಸಂತ್ರಸ್ಥರಾಗಿದ್ದಾರೆ.
ಭೂಕಂಪನದಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಿದ್ದು, ವರ್ಷದ ಮೊದಲ ದಿನವೇ ಸೆಂಟ್ರಲ್ ಜಪಾನ್ ನ ನಾಗರೀಕರು ಇಡೀ ರಾತ್ರಿ ಕತ್ತಲೆಯಲ್ಲಿ ಮುಳುಗುವಂತಾಗಿದೆ. ಜಪಾನ್ ಮಿಲಿಟರಿ ಬೇಸ್ ನಲ್ಲಿ ಕನಿಷ್ಠ ಸಾವಿರಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
155 ಬಾರಿ ಕಂಪನ
ಜಪಾನ್ ನ ಇಶಿಕಾವಾ, ನಿಗಾಟಾ ಮತ್ತು ಟೊಯಾಮಾ ಪ್ರಾಂತ್ಯಗಳ ಕರಾವಳಿ ಪ್ರದೇಶಗಳಲ್ಲಿ ಕಂಪನ ಸಂಭವಿಸಿದ್ದು, 155 ಬಾರಿ ಭೂಮಿ ಕಂಪಿಸಿದೆ. ಮೊದಲ ಆರು ಕಂಪನಗಳು ಪ್ರಬಲವಾಗಿದ್ದು, ಈ ಕಂಪನಗಳು ರಿಕ್ಟರ್ ಮಾಪಕದಲ್ಲಿ 6.2 ರಿಂದ 6.7ರವರೆಗೂ ದಾಖಲಾಗಿವೆ. ಬಳಿಕ ಕನಿಷ್ಠ 3 ರಂತೆ 140ಕ್ಕೂ ಅಧಿಕ ಕಂಪನಗಳು ಸಂಭವಿಸಿವೆ ಎಂದು ಭೂಕಂಪನ ಮಾಪನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರಾವಳಿಗೆ ಅಪ್ಪಳಿಸಿದ ಸುನಾಮಿ ಅಲೆಗಳು
ಜಪಾನ್ ಹವಾಮಾನ ಸಂಸ್ಥೆ ಸುನಾಮಿ ಎಚ್ಚರಿಕೆ ನೀಡಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. 5 ಮೀಟರ್ (16 ಅಡಿ) ಎತ್ತರದವರೆಗೆ ಅಲೆಗಳು ಬರುವ ಸಾಧ್ಯತೆಯಿದ್ದು, ಕರಾವಳಿ ಪ್ರದೇಶದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿತ್ತು.
ಸೋಮವಾರ ಕನಿಷ್ಠ 1.2 ಮೀಟರ್ (ನಾಲ್ಕು ಅಡಿ) ಎತ್ತರದ ಅಲೆಗಳು ಜಪಾನ್ ನ ವಾಜಿಮಾ ಬಂದರಿಗೆ ಅಪ್ಪಳಿಸಿವೆ. ಇದರ ಬೆನ್ನಲ್ಲೇ ಸಣ್ಣ ಸುನಾಮಿಗಳ ಸರಣಿಯು ಕೂಡ ಇತರೆಡೆ ವರದಿಯಾಗಿದೆ. ಆದರೆ ದೊಡ್ಡ ಸುನಾಮಿ ಅಲೆಗಳು ಅಪ್ಪಳಿಸಿದ ಕುರಿತು ವರದಿಯಾಗಿಲ್ಲ.
ಟೋಕಿಯೊ ಮತ್ತು ಇಡೀ ಕಾಂಟೊ ಪ್ರದೇಶದಲ್ಲಿ ಕಂಪನಗಳು ಸಂಭವಿಸಿವೆ. 2011 ರಲ್ಲಿ ಭೂಕಂಪದ ನಂತರ ಸುನಾಮಿಯಿಂದಾಗಿ 16 ಸಾವಿರ ಮಂದಿ ಸಾವನ್ನಪ್ಪಿದ್ದರು. ಮಾರ್ಚ್ 2011 ರಲ್ಲಿ, 9 ತೀವ್ರತೆಯ ವಿನಾಶಕಾರಿ ಸುನಾಮಿ ಸಂಭವಿಸಿದೆ. ಆಗ ಎದ್ದ ಸುನಾಮಿ ಅಲೆಗಳು ಫುಕುಶಿಮಾ ಪರಮಾಣು ಸ್ಥಾವರವನ್ನು ನಾಶಪಡಿಸಿದ್ದವು.