ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
ಡಿ.31ರ೦ದು ಉಡುಪಿ ಶ್ರೀಕೃಷ್ಣದೇವರಿಗೆ ಕೋಟಿ ತುಳಸಿ ಅರ್ಚನೆ-ಪ್ರದೀಪಕುಮಾರ್ ಕಲ್ಕೂರ
ಉಡುಪಿ: ಡಿ. 28 : ತುಳು ಶಿವಳ್ಳಿ ಮಾಧ್ವ ಮಹಾಮಂಡಲ (ತುಶಿಮಾಮ) ಕಡಿಯಾಳಿ ಘಟಕ ನೇತೃತ್ವದಲ್ಲಿ ಜಗದೊಡೆಯ ರುಕ್ಮಿಣೀ ಕರಾರ್ಚಿತ ಆಚಾರ್ಯ ಮಧ್ವ ಪ್ರತಿಷ್ಠಾಪಿತ ಭಾವಿಸಮೀರ ಶ್ರೀ ವಾದಿರಾಜಾದಿ ಮುನಿಪುಂಗವ ಸಂಸೇವಿತ ಉಡುಪಿ ಶ್ರೀಕೃಷ್ಣದೇವರಿಗೆ ಈ ತಿಂಗಳ 31ರಂದು ಕೋಟಿ ತುಳಸಿ ಅರ್ಚನೆ ಮಾಡಲಾಗುವುದು ಎಂದು ತುಶಿಮಾಮ ಕಾರ್ಯಾಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ ತಿಳಿಸಿದರು.
ಮಾರ್ಗಶೀರ್ಷ ಮಾಸದಲ್ಲಿ ಕಾರ್ಯಕ್ರಮ… ಗುರುವಾರ ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು, ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಆಶಯದಂತೆ ತುಶಿಮಾಮ ಕಡಿಯಾಳಿ ಘಟಕ ಮತ್ತು ಇತರ ಅಂಗಸಂಸ್ಥೆಗಳು ಹಾಗೂ ಉಡುಪಿ ಮತ್ತು ದ.ಕ. ಜಿಲ್ಲೆಗಳ ವಿವಿಧ ಬ್ರಾಹ್ಮಣ ಸಮುದಾಯಗಳ ಸಹಯೋಗದೊಂದಿಗೆ ಶುಭಕರವಾದ ಮಾರ್ಗಶೀರ್ಷ ಮಾಸ ಧನುರ್ಮಾಸ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಲೋಕಕಲ್ಯಾಣಾರ್ಥ ಕಾರ್ಯಕ್ರಮ… ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆಯ ಸದವಸರದಲ್ಲಿ ಲೋಕಸುಭಿಕ್ಷೆಗಾಗಿ ನಡೆಯುವ ಕಾರ್ಯಕ್ರಮ ಅಂದು ಬೆಳಿಗ್ಗೆ 7ರಿಂದ ಆರಂಭಗೊಳ್ಳಲಿದೆ. ಶ್ರೀಕೃಷ್ಣಮಠದಿಂದ ಶ್ರೀಕೃಷ್ಣನ ಮೂರ್ತಿಯನ್ನು ವೈಭವದ ಮೆರವಣಿಗೆ ಮೂಲಕ ರಾಜಾಂಗಣಕ್ಕೆ ತಂದು, ಪುಷ್ಪಾಲಂಕೃತ ವೇದಿಕೆಯ ಸಾಲಂಕಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುವುದು.
ಯತಿಗಳಿಂದ ಚಾಲನೆ… 7.30 ಗಂಟೆಗೆ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಮತ್ತು ಅಷ್ಟಮಠಗಳ ಯತಿಗಳು ತುಳಸಿ ಅರ್ಚನೆ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬಳಿಕ ಶ್ರೀ ವಿಷ್ಣು ಸಹಸ್ರನಾಮಾವಳಿ ಪಠಣಯುಕ್ತವಾಗಿ ಒಟ್ಟು ನಾಲ್ಕು ಆವರ್ತಿಯಲ್ಲಿ ಸಾಂಪ್ರದಾಯಿಕ ಸಮವಸ್ತ್ರಧಾರಿ ಸುಮಾರು 2,500 ಮಂದಿ ವಿಪ್ರರು ತುಳಸಿ ಅರ್ಚನೆ ನಡೆಸುವರು. ಮಹಿಳೆಯರು ಲಕ್ಷ್ಮೀಶೋಭಾನೆ ಪಠಿಸುವರು ಎಂದು ಕಲ್ಕೂರ ವಿವರಿಸಿದರು.
11.30 ವರೆಗೆ ತುಳಸಿ ಅರ್ಚನೆ ನಡೆಯಲಿದ್ದು, ಬಳಿಕ ತುಳಸಿ ಅರ್ಚನೆಯಲ್ಲಿ ಭಾಗವಹಿಸಿದವರಿಗೆ ಪ್ರಸಾದ ವಿತರಣೆ, ಶ್ರಿಗಳಿಂದ ಆಶೀರ್ವಚನ ನಡೆಯಲಿದೆ. 12 ಗಂಟೆ ಬಳಿಕ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯದರ್ಶಿ ರಾಜೇಶ ಭಟ್ ಪಣಿಪಾಡಿ ವಿವರಿಸಿದರು.
ತುಳಸಿ ಅರ್ಪಣೆಗೆ ಅವಕಾಶ… ಕಾರ್ಯಕ್ರಮ ತುಳಸಿ ಅರ್ಪಣೆ ಮತ್ತು ಅರ್ಚನೆ ಎಂಬ ಎರಡು ವಿಭಾಗಗಳಲ್ಲಿ ನಡೆಯಲಿದೆ. ಕೃಷ್ಣಭಕ್ತರೆಲ್ಲರಿಗೂ ತುಳಸಿ ಅರ್ಪಿಸಲು ಅವಕಾಶವಿದೆ. ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದ ತುಳಸಿಯನ್ನು ಶ್ರೀಕೃಷ್ಣ ಭಕ್ತರೆಲ್ಲರೂ ನೀಡಬಹುದು. ತುಳಸಿ ನೀಡಲಿಚ್ಛಿಸುವವರು ಡಿ. 30ರ ಸಂಜೆ 5 ಗಂಟೆಯೊಳಗೆ ಕೃಷ್ಣ ಮಠಕ್ಕೆ ತಂದೊಪ್ಪಿಸಬೇಕು ಎಂದು ತುಶಿಮಾಮ ಗೌರವಾಧ್ಯಕ್ಷ ಅರವಿಂದ ಆಚಾರ್ಯ ತಿಳಿಸಿದರು.
ಎರಡನೇ ಬಾರಿ… ಈ ಹಿಂದೆ ಪಲಿಮಾರು ಪರ್ಯಾಯ ಸಂದರ್ಭದಲ್ಲಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶ್ರೀಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ ನಡೆಸಲಾಗಿತ್ತು. ಇದೀಗ ದ್ವಿತೀಯ ಬಾರಿಗೆ ಕೋಟಿ ತುಳಸಿ ಅರ್ಚನೆ ನಡೆಯಲಿದೆ ಎಂದು ಅರವಿಂದ ಆಚಾರ್ಯ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ತುಶಿಮಾಮ ಅಧ್ಯಕ್ಷ ರವಿಪ್ರಕಾಶ ಭಟ್, ಕಡಿಯಾಳಿ ಘಟಕ ಅಧ್ಯಕ್ಷ ರಘುಪತಿ ಉಪಾಧ್ಯ, ಕೋಶಾಧಿಕಾರಿ ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯ, ಗೌರವ ಸಲಹೆಗಾರ ರಂಜನ್ ಕಲ್ಕೂರ, ಪಲಿಮಾರು ಮಠ ಪಿಆರ್.ಓ ಶ್ರೀಶ ಭಟ್ ಕಡೆಕಾರ್ ಇದ್ದರು.