ಸಿಎಂ ಸಿದ್ದರಾಮಯ್ಯರಿಂದ ಅಮಿತ್ ಶಾ ಭೇಟಿ; ಶೀಘ್ರ ಬರ ಪರಿಹಾರ ಬಿಡುಗಡೆಗೆ ಆಗ್ರಹ
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ರಾಜ್ಯಕ್ಕೆ 18,177.44 ಕೋಟಿ ರೂಪಾಯಿ ಬರ ಪರಿಹಾರವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಇಂದು ಸಂಸತ್ ಸಂಕೀರ್ಣದಲ್ಲಿರುವ ಅವರ ಕಚೇರಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ, ಕರ್ನಾಟಕಕ್ಕೆ ಬರ ಪರಿಹಾರ ಅನುಮೋದಿಸಲು ಉನ್ನತ ಮಟ್ಟದ ಸಮಿತಿಯ ಕೇಂದ್ರ ಸಭೆಯನ್ನು ಶೀಘ್ರ ಕರೆಯಬೇಕು ಎಂದು ಮನವಿ ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳಲ್ಲಿ ಬರಗಾಲದಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ಹೆಚ್ಚು ಹಾನಿಗೊಳಗಾಗಿದ್ದಾರೆ ಎಂದು ಸಿಎಂ ಸಭೆಯಲ್ಲಿ ತಿಳಿಸಿದರು.
48.19 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತಿದ ಬೆಳೆ ಹಾನಿಯಾಗಿದೆ. ಮೂರು ತಿಂಗಳ ಹಿಂದೆಯೇ ರಾಜ್ಯ ಸರ್ಕಾರ 18,177.44 ಕೋಟಿ ರೂ. ಬರ ಪರಿಹಾರ ಕೋರಿ ಮನವಿ ಸಲ್ಲಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬರ ಪರಿಹಾರ ಮಂಜೂರು ಮಾಡುವಾಗ ಕೇಂದ್ರ ಸರ್ಕಾರವು 2015-16ರ ಕೃಷಿ ಗಣತಿಯ ದತ್ತಾಂಶವನ್ನು ಪರಿಗಣಿಸುತ್ತಿದೆ. ಆದರೆ ಇದು 8 ವರ್ಷ ಹಳೆಯ ಮಾಹಿತಿಯಾಗಿದ್ದು, ಆಸ್ತಿ ವಿಭಜನೆ ಮತ್ತಿತರ ಕಾರಣಗಳಿಂದ ಸಣ್ಣ ಮತ್ತು ಅತಿ ಸಣ್ಣ ರೈತರ ಸಂಖ್ಯೆ ಹೆಚ್ಚಾಗಿದ್ದು, 83 ಲಕ್ಷಕ್ಕೂ ಹೆಚ್ಚಿದೆ. ಪಿಎಂ-ಕಿಸಾನ್ ಯೋಜನೆಗೆ ರಾಜ್ಯದ ರೈತರ ದತ್ತಾಂಶ ಸಂಗ್ರಹಿಸುವ ತಂತ್ರಾಂಶ ಫ್ರೂಟ್ಸ್‌ನಲ್ಲಿ ದಾಖಲಿಸಿದ ಮಾಹಿತಿಯನ್ನು ಪರಿಗಣಿಸಲಾಗುತ್ತಿದೆ. ಅಂತೆಯೇ ಬೆಳೆ ಪರಿಹಾರ ವಿತರಣೆಗೂ ಈ ದತ್ತಾಂಶವನ್ನು ಪರಿಗಣಿಸುವಂತೆ ಮನವಿ ಮನವಿ ಮಾಡಿರುವುದಾಗಿ ಸಿಎಂ ತಿಳಿಸಿದ್ದಾರೆ.
ಇದೇ ವಿಚಾರವಾಗಿ ಸಿದ್ದರಾಮಯ್ಯ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು.