ಕಿದಿಯೂರು ಹೋಟೆಲ್ ನಾಗ ಸನ್ನಿಧಿಯಲ್ಲಿ ತೃತೀಯ ನಾಗಮಂಡಲೋತ್ಸವ ಆಹ್ವಾನ ಪತ್ರಿಕೆ ಬಿಡುಗಡೆ
ಉಡುಪಿ: ಡಿ.9: ಸರ್ವ ಧರ್ಮೀಯರ ಮೆಚ್ಚುಗೆಗೆ ಪಾತ್ರವಾಗಿರುವ ನಗರದ ಪ್ರತಿಷ್ಠಿತ ಹೋಟೆಲ್ ಕಿದಿಯೂರ್ ಆವರಣದಲ್ಲಿರುವ ಕಾರಣಿಕ ಶ್ರೀ ನಾಗ ಸನ್ನಿಧಿಯಲ್ಲಿ ಜನವರಿ 26ರಿಂದ 31ರ ವರೆಗೆ ವೈಭವೋಪೇತವಾಗಿ ಅಷ್ಟ ಪವಿತ್ರ ನಾಗಮಂಡಲೋತ್ಸವ ನಡೆಯಲಿದ್ದು, ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶನಿವಾರ ಭಾವಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.
ಸಂಪತ್ತಿಗೆ ಮೂರು ದಾರಿ ಈ ಸಂದರ್ಭದಲ್ಲಿ ಆಶೀರ್ಚನ ನೀಡಿದ ಶ್ರೀಪಾದರು, ಸಂಪತ್ತಿನ ವಿನಿಯೋಗಕ್ಕೆ ಮೂರು ದಾರಿಗಳಿವೆ. ದಾನ, ಭೋಗ, ನಾಶ. ಇದರಲ್ಲಿ ದಾನ ಶ್ರೇಷ್ಠವಾಗಿದೆ. ದೇವರು ಕೊಟ್ಟದ್ದನ್ನು ದೇವರಿಗೆ ಅರ್ಪಿಸುವುದು ಉತ್ತಮ ವಿಧಾನ. ಅದರಿಂದ ಜೀವನ ಧನ್ಯವಾಗುತ್ತದೆ ಎಂದರು.
ಸಂಪತ್ತು ಶಾಶ್ವತವಲ್ಲ. ಹಾಗಾಗಿ ಹಣವನ್ನು ಪುಣ್ಯವಾಗಿ ಪರಿವರ್ತಿಸಿದರೆ ಇಹಲೋಕದಲ್ಲಿ ಮಾತ್ರವಲ್ಲದೇ ಪರಲೋಕದಲ್ಲೂ ಸುಖ ಪ್ರಾಪ್ತಿಯಾಗುತ್ತದೆ ಎಂದರು.
ಪರ್ಯಾಯೋತ್ಸವದೊಂದಿಗೆ ನಾಗಮಂಡಲೋತ್ಸವ ನಡೆಯುತ್ತಿರುವುದು ಈ ಬಾರಿಯ ವಿಶೇಷ.ನಮ್ಮ ಪರ್ಯಾಯ ವಿಶ್ವ ಗೀತಾ ಪರ್ಯಾಯವಾಗಿದ್ದು, ಗೀತಾ ಮಂದಿರದಲ್ಲಿ ದಿನವಿಡೀ ಭಗವದ್ಗೀತೆಯ ಪಾರಾಯಣ ನಡೆಯಲಿದೆ. ಕೋಟಿ ಗೀತಾ ಲೇಖನ ಯಜ್ಞದಲ್ಲಿ ಭಾಗವಹಿಸಿದವರು ಬಂದು ಗೀತೆ ಓದಬಹುದು ಎಂದರು.
ಹೋಟೆಲ್ ಕಿದಿಯೂರು ಆಡಳಿತ ಮುಖ್ಯಸ್ಥ ಭುವನೇಂದ್ರ ಕಿದಿಯೂರು, ಜ್ಯೋತಿಷಿ ಕಬಿಯಾಡಿ ಜಯರಾಮ ಆಚಾರ್ಯ, ಉದ್ಯಮಿಗಳಾದ ನಾಡೋಜ ಡಾl ಜಿ. ಶಂಕರ್, ಪುರುಷೋತ್ತಮ ಶೆಟ್ಟಿ, ಮನೋಹರ ಶೆಟ್ಟಿ, ಹಿರಿಯಣ್ಣ ಕಿದಿಯೂರು, ಹರಿಯಪ್ಪ ಕೋಟ್ಯಾನ್, ಶ್ರೀಧರ ಶೆಟ್ಟಿ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ನಗರಸಭಾ ಸದಸ್ಯರಾದ ವಿಜಯ ಕೊಡವೂರು ಮತ್ತು ರಮೇಶ್ ಕಾಂಚನ್, ಡಾ. ವಿಜಯೇಂದ್ರ ವಸಂತ್, ಗಣೇಶ್ ರಾವ್ ಉಪಸ್ಥಿತರಿದ್ದರು.