Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಕನ್ನಡ ಚಿತ್ರರಂಗದ ಪ್ರಖ್ಯಾತ ಹಿರಿಯ ನಟಿ ಲೀಲಾವತಿ ವಿಧಿವಶ

ಬೆಂಗಳೂರು: ಕೆಲ ದಿನಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಪ್ರಖ್ಯಾತ ಹಿರಿಯ ನಟಿ ಲೀಲಾವತಿ ಅವರು ಇಂದು ಸಂಜೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ.

ಅವರಿಗೆ 86 ವರ್ಷ ವಯಸ್ಸಾಗಿತ್ತು.ನೆಲಮಂಗಲದ ಸೋಲದೇವನ ಹಳ್ಳಿಯ ನಿವಾಸದಲ್ಲೇ ಅವರಿಗೆ ಆರೈಕೆ ಮಾಡಲಾಗುತ್ತಿತ್ತು. ಪುತ್ರ ವಿನೋದ್ ರಾಜ್ ಅವರು ನೋಡಿ ಕೊಳ್ಳುತ್ತಿದ್ದರು.

ದಕ್ಷಿಣ ಕನ್ನಡ ದ ಬೆಳ್ತಂಗಡಿ ಮೂಲದ ಲೀಲಾವತಿ ( ಲೀಲಾ ಕಿರಣ್) ಕನ್ನಡ, ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದ ಹಿರಿಯ ಭಾರತೀಯ ನಟಿ. 50 ವರ್ಷಗಳಿಗೂ ಹೆಚ್ಚು ಕಾಲ ತಮ್ಮ ವೃತ್ತಿಜೀವನದುದ್ದಕ್ಕೂ 600 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿ 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಮನೆ ಮಾತಾಗಿದ್ದರು. ಭಕ್ತ ಕುಂಬಾರ, ಮನ ಮೆಚ್ಚಿದ ಮಡದಿ ಮತ್ತು ಸಂತ ತುಕಾರಂ ಚಿತ್ರಗಳಲ್ಲಿನ ಸ್ಮರಣೀಯ ಅಭಿನಯಕ್ಕಾಗಿ ಅವರು ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದರು. ವರು 1999 ರಲ್ಲಿ ಡಾ. ರಾಜ್‌ಕುಮಾರ್ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಚಂಚಲಾ ಕುಮಾರಿ ನಂತರ ಶಂಕರ್ ಸಿಂಗ್ ಅವರ ನಾಗ ಕನ್ನಿಕಾ ಚಿತ್ರದಲ್ಲಿ ಸಣ್ಣ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಲೀಲಾವತಿ ಅವರು ಮಹಾಲಿಂಗ ಭಾಗವತರ್ ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಕಂಪನಿಗೆ ಸೇರಿದರು.

ಸುಬ್ಬಯ್ಯ ನಾಯ್ಡು ಅವರ 1958 ರ ಸೂಪರ್ ಹಿಟ್ ಚಲನಚಿತ್ರ ಭಕ್ತ ಪ್ರಹ್ಲಾದ, ಬಳಿಕ ಮಾಂಗಲ್ಯ ಯೋಗ, ಧರ್ಮ ವಿಜಯ ಮತ್ತು ರಣಧೀರ ಕಂಠೀರವ ಮುಂತಾದ ಚಲನಚಿತ್ರಗಳಲ್ಲಿ ನಟಿಸಿ ಗಮನ ಸೆಳೆದರು.

ರಾಣಿ ಹೊನ್ನಮ್ಮ ಚಿತ್ರದಿಂದ ಲೀಲಾವತಿ ಪೂರ್ಣ ಪ್ರಮಾಣದ ನಾಯಕಿಯಾದರು.ಸಂತ ತುಕಾರಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ ಮತ್ತು ಮನ ಮೆಚ್ಚಿದ ಮಡದಿ ಚಿತ್ರಗಳಲ್ಲಿ ನಾಯಕಿ. ಅವರು ಗೆಜ್ಜೆ ಪೂಜೆ ಮತ್ತು ಡಾಕ್ಟರ್ ಕೃಷ್ಣ ಚಿತ್ರದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದರು. ಮನೋಜ್ಞ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು.

ಭೂದಾನ ಚಿತ್ರದಲ್ಲಿ ಡಾ. ರಾಜಕುಮಾರ್ ಅವರ ಮಗಳಾಗಿ, ವಾತ್ಸಲ್ಯ ಚಿತ್ರದಲ್ಲಿ ತಂಗಿಯಾಗಿ,ಪ್ರೇಮಮಯಿ ಚಿತ್ರದಲ್ಲಿ ಅತ್ತಿಗೆಯಾಗಿ ವಿವಿಧ ಚಿತ್ರಗಳಲ್ಲಿ ರಾಜಕುಮಾರ್ ಅವರೊಂದಿಗೆ ನಾಯಕಿಯಾಗಿ ಕೆಲಸ ಮಾಡಿದ ಜನ ಮೆಚ್ಚಿದ ಅಪೂರ್ವ ಜೋಡಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಶ್ರಾವಣ ಬಂತು , ವಸಂತಗೀತೆ, ನಾ ನಿನ್ನ ಮರೆಯಲಾರೆ ಮತ್ತು ಜ್ವಾಲಾಮುಖಿಯಲ್ಲಿಯೂ ನಟಿಸಿದ್ದರು.

No Comments

Leave A Comment