Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಗೌರಿ ಲಂಕೇಶ್, ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ: ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಸಿಎಂ ಸೂಚನೆ

ಬೆಂಗಳೂರು: ಹಿರಿಯ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹಾಗೂ ಹಿರಿಯ ಸಾಹಿತಿ, ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸೂಚನೆ ನೀಡಿದ್ದಾರೆ.

ಈ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಎಂ.ಎಂ.ಕಲಬುರ್ಗಿ 2015ರ ಆ.31ರಂದು ಧಾರವಾಡದ ಅವರ ಸ್ವಗೃಹದಲ್ಲಿ ಹತ್ಯೆಯಾಗಿ ಏಳು ವರ್ಷಗಳು ಪೂರ್ಣಗೊಂಡಿವೆ. ಪ್ರಕರಣದ ಸಂಬಂಧ 2018-19ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಮೃತರ ಕುಟುಂಬದವರ ವಿಚಾರಣೆಗಳು ಪೂರ್ಣಗೊಂಡಿದ್ದರೂ ನ್ಯಾಯಾಲಯದಲ್ಲಿ ವಿಚಾರಣೆಗಳು ಮುಂದುವರಿದಿವೆ.

ಈಗಾಗಲೇ ಸಾಕಷ್ಟು ಸಮಯ ಆಗಿರುವುದರಿಂದ ವಿಶೇಷ ನ್ಯಾಯಾಲಯ ರಚಿಸುವಂತೆ ಮೃತರ ಪತ್ನಿ ಉಮಾದೇವಿ ಎಂ.ಕಲಬುರ್ಗಿ ಕೋರಿದ್ದು, ಈ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಇನ್ನು ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಗೌರಿ ಲಂಕೇಶ್ 2017ರ ಸೆ.5ರಂದು ಹತ್ಯೆಗೀಡಾಗಿದ್ದು, ಈ ಸಂಬಂಧ ವಿಶೇಷ ತನಿಖಾ ದಳ ರಚಿಸಲಾಗಿದೆ. ಇದುವರೆಗೂ 18 ಆರೋಪಿಗಳು ಬಂಧನಕ್ಕೊಳಗಾಗಿದ್ದು, 1200 ಪುರಾವೆ ಹಾಗೂ 500ಕ್ಕೂ ಹೆಚ್ಚು ವಿವಿಧ ಬಗೆಯ ಸಾಕ್ಷ್ಯಗಳನ್ನೊಳಗೊಂಡ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಕರಣದ ವಿಚಾರಣೆಯು ನ್ಯಾಯಾಲಯದಲ್ಲಿ ಜುಲೈ, 2022 ರಿಂದ ಪ್ರಾರಂಭಗೊಂಡಿದ್ದು, ನ್ಯಾಯಾಲಯದ ಅನುದಿನದ ಪ್ರಕರಣಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ವಿಚಾರಣೆಯು ನಿಧಾನಗತಿಯಲ್ಲಿ ಸಾಗಿದೆ. ಆದ್ದರಿಂದ, ಈ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಿ, ಪೂರ್ಣಾವಧಿ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ರವರು ಸರ್ಕಾರಕ್ಕೆ ಕೋರಿದ್ದು. ಈ ಬಗ್ಗೆ ಜರೂರು ಅಗತ್ಯ ಕ್ರಮವಹಿಸಲು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

No Comments

Leave A Comment