‘ನಿರ್ಧಾರವಾಗಿದೆ ಎಂದ ರಾಹುಲ್ ಗಾಂಧಿ; ತೆಲಂಗಾಣ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಆಯ್ಕೆ!
ಹೈದರಾಬಾದ್: ತೆಲಂಗಾಣ ಕಾಂಗ್ರೆಸ್ (Telangana Congress) ಮುಖ್ಯಸ್ಥ ಅನುಮುಲಾ ರೇವಂತ್ ರೆಡ್ಡಿ (Anumula Revanth Reddy) ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದ್ದು, “ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.
ನವೆಂಬರ್ 30 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಭೂತಪೂರ್ವ ಗೆಲುವಿಗೆ ಕಾರಣರಾದ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ಅನುಮುಲಾ ರೇವಂತ್ ರೆಡ್ಡಿ ಅವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಆಯ್ಕೆಯಾಗಿದ್ದಾರೆ. “ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ, ಉನ್ನತ ಸ್ಥಾನಕ್ಕೆ ರೇವಂತ್ ರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಆಯ್ಕೆ ಕುರಿತ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ರಾಹುಲ್ ಗಾಂಧಿ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸೇರಿದಂತೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ನಿರ್ಧಾರ ಪ್ರಕಟಿಸುವ ಮುನ್ನ ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಶಾಸಕಾಂಗ ಸಭೆ ಬಳಿಕ ಅಧಿಕೃತವಾಗಿ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ನ ಗೆಲುವಿನ ಪ್ರಚಾರದ ಮುಖವಾಗಿದ್ದ ಐವತ್ನಾಲ್ಕು ವರ್ಷದ ರೇವಂತ್ ರೆಡ್ಡಿ ಅವರು ಉನ್ನತ ಹುದ್ದೆಗೆ ಆಯ್ಕೆಯಾಗುವ ಪ್ರಕ್ರಿಯೆಯಲ್ಲಿ ತಮ್ಮದೇ ಪಕ್ಷದ ಹಿರಿಯ ನಾಯಕರಿಂದ ಪೈಪೋಟಿ ಎದುರಿಸಿದ್ದರು. ನಿನ್ನೆ ಸಂಜೆಯೇ ನಡೆಯಬೇಕಿದ್ದ ಪ್ರಮಾಣ ವಚನ ಸಮಾರಂಭವನ್ನು ರಾಜ್ಯ ಕಾಂಗ್ರೆಸ್ ಹಿರಿಯರು ಮುಖ್ಯಮಂತ್ರಿ ಸ್ಥಾನಕ್ಕೆ ರೇವಂತ್ ರೆಡ್ಡಿ ಆಯ್ಕೆಯನ್ನು ವಿರೋಧಿಸಿದ ನಂತರ ರದ್ದುಗೊಳಿಸಲಾಗಿತ್ತು. ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಎನ್ ಉತ್ತಮ್ ಕುಮಾರ್ ರೆಡ್ಡಿ, ಮಾಜಿ ಸಿಎಲ್ಪಿ ನಾಯಕ ಭಟ್ಟಿ ವಿಕ್ರಮಾರ್ಕ, ಮಾಜಿ ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ಮಾಜಿ ಉಪಮುಖ್ಯಮಂತ್ರಿ ದಾಮೋದರ್ ರಾಜನರಸಿಂಹ ಸಿಎಂ ಗಾದಿ ರೇಸ್ ನಲ್ಲಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ ಈ ಎಲ್ಲ ನಾಯಕರು ರೇವಂತ್ ರೆಡ್ಡಿಯನ್ನು ಸಿಎಂ ಆಗಿ ಆಯ್ಕೆ ಮಾಡಲು ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದರು.
ರೇವಂತ್ ರೆಡ್ಡಿ ವಿರುದ್ಧ ಬಾಕಿ ಉಳಿದಿರುವ ಭ್ರಷ್ಟಾಚಾರ ಪ್ರಕರಣಗಳು ಮತ್ತು ರೇವಂತ್ ರೆಡ್ಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನ ಮುಂದಿಟ್ಟುಕೊಂಡು ಅವರಿಗೆ ಸಿಎಂ ಸ್ಥಾನ ನೀಡಬಾರದು ಎಂದು ನಾಯಕರು ಪಟ್ಟು ಹಿಡಿದ್ದಾರೆ ಎಂದು ಹೇಳಲಾಗೆದೆ. 2021 ರಲ್ಲಿ ತೆಲಂಗಾಣ ಕಾಂಗ್ರೆಸ್‌ನ ಉಸ್ತುವಾರಿ ವಹಿಸಿದಾಗ ರೇವಂತ್ ರೆಡ್ಡಿ ಅವರು ಸವಾಲನ್ನು ಎದುರಿಸಿದ್ದರು. ಅಲ್ಲದೆ ಅವರ ವಿರುದ್ಧ ಹುದ್ದೆಯನ್ನು ಪಡೆಯಲು ಕೋಟಿಗಟ್ಟಲೆ ಹಣ ಪಾವತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಕಾಂಗ್ರೆಸ್ ಪಕ್ಷದ 64 ಶಾಸಕರಲ್ಲಿ 42 ಶಾಸಕರು ರೇವಂತ್ ರೆಡ್ಡಿ ಅವರ ನಿಷ್ಠಾವಂತರಾಗಿದ್ದಾರೆ.