ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಪಂಜಾಬ್: ಪಾಕಿಸ್ತಾನದ ಡ್ರೋನ್ ತಡೆದ ಬಿಎಸ್ಎಫ್; ಒಂದು ಪಿಸ್ತೂಲ್, 5.240 ಕೆಜಿ ಹೆರಾಯಿನ್ ವಶ
ಅಮೃತಸರ: ಭಾರತದ ವಾಯುಪ್ರದೇಶಕ್ಕೆ ಬಂದಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆಯು (ಬಿಎಸ್ಎಫ್) ತಡೆದಿದ್ದು, ಡ್ರೋನ್ ಸೇರಿದಂತೆ ಪಿಸ್ತೂಲ್ ಮತ್ತು 5.240 ಕೆಜಿ ಹೆರಾಯಿನ್ ಅನ್ನು ಅಮೃತಸರ ಜಿಲ್ಲೆಯ ಚಕ್ ಅಲ್ಲಾ ಬಕ್ಷ್‌ನಲ್ಲಿ ವಶಪಡಿಸಿಕೊಂಡಿದೆ.
‘ನವೆಂಬರ್ 26ರ ಮುಂಜಾನೆ, ಪಾಕಿಸ್ತಾನದ ಡ್ರೋನ್ ನಿಯಮ ಉಲ್ಲಂಘಿಸಿ ಭಾರತೀಯ ವಾಯುಪ್ರದೇಶಕ್ಕೆ ಬಂದಿದೆ. ಇದನ್ನು ಬಿಎಸ್‌ಎಫ್ ಪಡೆಗಳು ಗುಂಡಿನ ದಾಳಿಯೊಂದಿಗೆ ತಡೆದವು. ಶೋಧ ಕಾರ್ಯಾಚರಣೆ ವೇಳೆ, ಬಿಎಸ್ಎಫ್ ಪಂಜಾಬ್ ಫ್ರಾಂಟಿಯರ್‌ನ ಪಡೆಗಳು ಅಮೃತಸರ ಜಿಲ್ಲೆಯ ಚಕ್ ಅಲ್ಲಾ ಬಕ್ಷ್ ಗ್ರಾಮದಿಂದ ಒಂದು ಪಿಸ್ತೂಲ್, 2 ಮ್ಯಾಗಜೀನ್‌ಗಳು, 20 ಲೈವ್ ರೌಂಡ್ಸ್ ಮತ್ತು 5.240 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿವೆ. ಈ ಮೂಲಕ ಪಾಕಿಸ್ತಾನಿ ಸ್ಮಗ್ಲರ್‌ಗಳ ಮತ್ತೊಂದು ಕಳ್ಳಸಾಗಣೆ ಪ್ರಯತ್ನವನ್ನು ಬಿಎಸ್‌ಎಫ್ ವಿಫಲಗೊಳಿಸಿದೆ’ ಎಂದು ಪಂಜಾಬ್ ಬಿಎಸ್‌ಎಫ್ ಟ್ವೀಟ್ ಮಾಡಿದೆ.
ಇದಕ್ಕೂ ಮೊದಲು, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಈ ವರ್ಷದ ಕಳೆದ 10 ತಿಂಗಳಲ್ಲಿ ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ 69 ಪಾಕಿಸ್ತಾನಿ ಡ್ರೋನ್‌ಗಳನ್ನು ವಶಪಡಿಸಿಕೊಂಡಿದೆ. ಈ ಮೂಲಕ ಮಾದಕವಸ್ತುಗಳ ಕಳ್ಳಸಾಗಣೆ ಪ್ರಯತ್ನಗಳನ್ನು ವಿಫಲಗೊಳಿಸಿದೆ ಎಂದು ಗಡಿ ಕಾವಲು ಪಡೆ ಸಂಗ್ರಹಿಸಿದ ಅಂಕಿಅಂಶಗಳು ಬಹಿರಂಗಪಡಿಸಿವೆ.
ಅಂಕಿಅಂಶಗಳ ಪ್ರಕಾರ, ಪಂಜಾಬ್, ರಾಜಸ್ಥಾನ ಮತ್ತು ಜಮ್ಮು ಗಡಿಗಳಲ್ಲಿ ಹಾದುಹೋಗುವ ಭಾರತದ ಪಶ್ಚಿಮ ಗಡಿಯಲ್ಲಿ ಈ ವರ್ಷದ ಜನವರಿ 1 ರಿಂದ ಅಕ್ಟೋಬರ್ 31ರ ನಡುವೆ ಒಟ್ಟು 69 ಡ್ರೋನ್‌ಗಳನ್ನು ಬಿಎಸ್‌ಎಫ್ ವಶಪಡಿಸಿಕೊಂಡಿದೆ. ಈ ಪೈಕಿ 60 ಡ್ರೋನ್‌ಗಳನ್ನು ಪಂಜಾಬ್ ಗಡಿಯಿಂದ ಮತ್ತು ಒಂಬತ್ತನ್ನು ರಾಜಸ್ಥಾನ ಗಡಿಯಿಂದ ವಶಪಡಿಸಿಕೊಳ್ಳಲಾಗಿದೆ.
ಅಕ್ಟೋಬರ್‌ನಲ್ಲಿ ಗರಿಷ್ಠ 21 ಡ್ರೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 19 ಪಂಜಾಬ್‌ನಿಂದ ಮತ್ತು ಎರಡು ರಾಜಸ್ಥಾನದ ಗಡಿಯಿಂದ ವಶಪಡಿಸಿಕೊಳ್ಳಲಾಗಿದೆ.
ಜೂನ್‌ನಲ್ಲಿ ಒಟ್ಟು 11 ಡ್ರೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೇನಲ್ಲಿ ಏಳು, ಫೆಬ್ರುವರಿ, ಜುಲೈ ಮತ್ತು ಸೆಪ್ಟೆಂಬರ್‌ನಲ್ಲಿ ತಲಾ ಆರು, ಆಗಸ್ಟ್‌ನಲ್ಲಿ ಐದು, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ತಲಾ ಮೂರು ಹಾಗೂ ಜನವರಿಯಲ್ಲಿ ಒಂದನ್ನು ವಶಪಡಿಸಿಕೊಳ್ಳಲಾಗಿದೆ. ಜನವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ರಾಜಸ್ಥಾನ ಗಡಿಯಿಂದ ಯಾವುದೇ ಡ್ರೋನ್ ವಶಪಡಿಸಿಕೊಳ್ಳುವಿಕೆ ಕಂಡುಬಂದಿಲ್ಲ ಎಂದು ಡೇಟಾ ತೋರಿಸುತ್ತದೆ.