Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಜಾತಿಗಣತಿ ವರದಿ: ಸಿಎಂ ತರಾತುರಿ ನಡೆ ಸಂಶಯಾಸ್ಪದ, ಹೋರಾಟ ನಿಶ್ಚಿತ- ವಿಪಕ್ಷ ನಾಯಕ ಆರ್. ಅಶೋಕ್

ಬೆಂಗಳೂರು : ವಿವಾದಿತ ಕಾಂತರಾಜು ವರದಿ ಸ್ವೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತರಾತುರಿ ತೋರುತ್ತಿರುವುದು ಅನೇಕ ಅನುಮಾನಗಳನ್ನು ಹುಟ್ಟು ಹಾಕುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ವರದಿಯ ಮೂಲಪ್ರತಿ ಕಾಣೆಯಾಗಿದೆ, ಅದಕ್ಕೆ ಕಾರ್ಯದರ್ಶಿ ಸಹಿ ಇಲ್ಲ, ಇದೊಂದು ಅವೈಜ್ಞಾನಿಕ ವರದಿ ಎಂದು ಅನೇಕ ಸಮುದಾಯಗಳು ಆರೋಪಿಸಿವೆ. ಸಚಿವ ಸಂಪುಟದಲ್ಲೇ ಸಹಮತ ಇಲ್ಲ. ಇಂತಹ ಸಂದರ್ಭದಲ್ಲಿ ವಿವಾದಿತ ವರದಿ ಪಡೆಯಲು ಆತುರ ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

ವಿಧಾನಸೌಧದ ಅಧಿಕೃತ ಕಚೇರಿಯಲ್ಲಿಂದು ಕಾರ್ಯಾರಂಭ ಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಕೋಟಿಗಟ್ಟಲೇ ಹಣ ಕೊಟ್ಟು ಸಿದ್ಧಪಡಿಸಿದ ವರದಿ ಕಳುವಾಗಲು ಯಾರು ಕಾರಣ? ಅದರ ಹೊಣೆ ಯಾರದ್ದು? ಕಳುವು ಪ್ರಕರಣದ ಬಗ್ಗೆ ಏಕೆ ತನಿಖೆ ನಡೆಸಲಿಲ್ಲ. ಮೂಲ ವರದಿ ಕಳುವಾಗಿದ್ದರೂ ಅದರ ದತ್ತಾಂಶ ಇದೆ ಎಂದು ಪರಿಷ್ಕೃತ ವರದಿ ಸಿದ್ಧಪಡಿಸುವುದು ಎಷ್ಟು ಸರಿ ಎಂದು ಮುಖ್ಯಮಂತ್ರಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಯಾರನ್ನೂ ಓಲೈಸಲು ಸಿಎಂ ಯತ್ನ: ಹತ್ತು ವರ್ಷಗಳ ಹಿಂದಿನ ಜನಸಂಖ್ಯೆಗೂ, ಈಗಿನ ಜನಸಂಖ್ಯೆಗೂ ಸಾಕಷ್ಟು ವ್ಯತ್ಯಾಸ ಇದೆ. ಸಾರ್ವಜನಿಕರಿಂದಲೂ ತಮ್ಮ ಮನೆಗಳಿಗೆ ಸಮೀಕ್ಷೆ ನಡೆಸುವವರು ಬಂದಿರಲಿಲ್ಲ ಎಂದು ವ್ಯಾಪಕ ದೂರುಗಳು ಬಂದಿವೆ. ಇಷ್ಟಾದರೂ ವರದಿ ಸ್ವೀಕರಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಆತುರ ತೋರುತ್ತಿರುವುದು ಜನರಲ್ಲಿ ಸಂಶಯವನ್ನು ಹುಟ್ಟು ಹಾಕಿದೆ. ಈ ಆತಿಯಾದ ಆತುರದ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಓಲೈಸುವ ಹುನ್ನಾರ ಇದ್ದಂತಿದೆ ಎಂದು ಆರೋಪಿಸಿದರು.

ಸಿಎಂ ಅವರ ಈ ನಡುವಳಿಕೆ ಹಿಂದೆ ಏನನ್ನೂ ಮುಚ್ಚಿಡುವ, ಯಾರನ್ನೂ ರಕ್ಷಿಸುವ ಸಂಶಯ ಮೂಡುತ್ತಿದೆ. ಈ ಎಲ್ಲಾ ವಿವಾದಗಳ ಕಾರಣಕ್ಕೆ ನಮ್ಮ ಸರಕಾರ ವರದಿಯ ಸಹವಾಸಕ್ಕೆ ಹೋಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

ಪಾರದರ್ಶಕತೆ ಪ್ರದರ್ಶಿಸಿ : ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂಬ ವಿಷಯದಲ್ಲಿ ನಮ್ಮ ಸಹಮತವಿದೆ. ಆದರೆ ಅವೈಜ್ಞಾನಿಕ, ವಿವಾದಿತ ವರದಿ ಆಧರಿಸಿ ಕ್ರಮಕ್ಕೆ ಮುಂದಾದರೆ ನಮ್ಮ ವಿರೋಧವಿದೆ. ಒಂದು ವೇಳೆ ಇವರಿಗೆ ನಿಜವಾಗಿಯೂ ಮೀಸಲು ನೀಡುವ ವಿಷಯದಲ್ಲಿ ಬದ್ಧತೆ ಇದ್ದರೆ ಪಾರದರ್ಶಕವಾಗಿ ಮರು ಸಮೀಕ್ಷೆ ನಡೆಸಲಿ. ವಿರೋಧ ವ್ಯಕ್ತಪಡಿಸಿರುವ ಸ್ವಾಮೀಜಿಗಳು, ಮುಖಂಡರನ್ನು ಕರೆದು ಅಭಿಪ್ರಾಯ ಕೇಳಲಿ ಎಂದರು.

ಕಳೆದ ಅವಧಿಯಲ್ಲಿ ಲಿಂಗಾಯತ ವೀರಶೈವರ ವಿಚಾರಕ್ಕೆ ಕೈಹಾಕಿ ಏನಾಯಿತು? ಮತ್ತೆ ಅದೇ ರೀತಿ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸಕ್ಕೆ ಸಿದ್ದರಾಮಯ್ಯ ಕೈಹಾಕುವುದಿಲ್ಲ ಎಂದು ಭಾವಿಸಿರುವುದಾಗಿ ಹೇಳಿದರು.

ಹೋರಾಟ ನಿಶ್ಚಿತ: ಈ ಎಚ್ಚರಿಕೆ, ವಿರೋಧಗಳ ನಡುವೆಯೂ ತರಾತುರಿಯಲ್ಲಿ ವರದಿ ಪಡೆಯಲು ಮುಂದಾದರೆ ರಾಜ್ಯಾದ್ಯಂತ ಪಕ್ಷವು ಉಗ್ರವಾದ ಹೋರಾಟ ನಡೆಸಲಿದೆ. ಅದಕ್ಕೆ ಅವಕಾಶ ನೀಡದೆ ವರದಿ ಕಳವಿಗೆ ಕಾರಣಗಳನ್ನು ಪತ್ತೆ ಹಚ್ಚಲಿ ಎಂದರು.

No Comments

Leave A Comment