ವಿಜಯೇಂದ್ರಗೆ ಸ್ವಾಭಿಮಾನ ಇದ್ದರೆ ರಾಜೀನಾಮೆ ನೀಡಬೇಕು: ಯತ್ನಾಳ್ ಕಿಡಿ....ಕರ್ನಾಟಕ ಉಪಚುನಾವಣೆ ಫಲಿತಾಂಶ: ಆಡಳಿತಾರೂಢ ಕಾಂಗ್ರೆಸ್‌ ಕ್ಲೀನ್ ಸ್ವೀಪ್; ಎನ್ ಡಿಎಗೆ ಮುಖಭಂಗ....

ಇಸ್ರೇಲ್-ಹಮಾಸ್ ನಡುವೆ ಮಧ್ಯಸ್ಥಿಕೆ: ದೃಢಪಡಿಸಿದ ಕತಾರ್, ಒತ್ತೆಯಾಳುಗಳ ಬಿಡುಗಡೆ ಒಪ್ಪಂದ ಸ್ವಾಗತಿಸಿದ ಅಮೆರಿಕಾ

ಟೆಲ್‌ ಅವಿವ್‌: ಹಮಾಸ್ ವಶದಲ್ಲಿರುವ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 50 ಒತ್ತೆಯಾಳುಗಳ ಬಿಡುಗಡೆ ಕುರಿತ ಮಾತುಕತೆಯ ಮಧ್ಯಸ್ಥಿಕೆ ವಹಿಸಿರುವುದನ್ನು ಕತಾರ್ ದೃಢಪಡಿಸಿದ್ದು, ಒತ್ತೆಯಾಳುಗಳ ಬಿಡುಗಡೆ ಕುರಿತ  ಹಮಾಸ್-ಇಸ್ರೇಲ್ ಒಪ್ಪಂದವನ್ನು ಅಮೆರಿಕಾ ಸ್ವಾಗತಿಸಿದೆ.

ಅಕ್ಟೋಬರ್ 7 ರಂದು ನಡೆಸಲಾದ ದಾಳಿಯಲ್ಲಿ ಹಮಾಸ್ ಬಂಡುಕೋರರು 240 ಮಂದಿ ಇಸ್ರೇಲಿಗರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದು, ಈ ಪೈಕಿ ಕನಿಷ್ಠ 50 ಜನರನ್ನು ನಾಲ್ಕು ದಿನಗಳ ಅವಧಿಯಲ್ಲಿ ಹಮಾಸ್ ಮುಕ್ತಗೊಳಿಸಲಿದೆ ಎಂದು ಇಸ್ರೇಲಿ ಸರ್ಕಾರ ಹೇಳಿದೆ. ಈ ವಿಚಾರದಲ್ಲಿ ಕತಾರ್ ಹಾಗೂ ಅಮೆರಿಕಾ ಮಧ್ಯಸ್ಥಿಕೆ ವಹಿಸಲಿದೆ ಎಂದೂ ತಿಳಿಸಿದೆ.

ಇದೀಗ ಮಧ್ಯಸ್ಥಿಕೆ ವಿಚಾರವನ್ನು ಕತಾರ್ ಕೂಡ ದೃಢಪಡಿಸಿದೆ. ಮುಂದಿನ 24 ಗಂಟೆಗಳಲ್ಲಿ ಒತ್ತೆಯಾಳುಗಳ ಬಿಡುಗಡೆ ಸಮಯವನ್ನು ಘೋಷಿಸಲಾಗುವುದು. ಇಲ್ಲಿಂದ ನಾಲ್ಕು ದಿನಗಳವರೆಗೆ ಕದನ ವಿರಾಮ ಇರಲಿದೆ ಎಂದು ಹೇಳಿದೆ.

ಕದನ ವಿರಾಮದ ಆರಂಭಿಕ ಸಮಯವನ್ನು ಮುಂದಿನ 24 ಗಂಟೆಗಳ ಒಳಗೆ ಘೋಷಿಸಲಾಗುವುದು ಎಂದು ತಿಳಿಸಿದೆ.

ಈ ಒಪ್ಪಂದವು ಇಸ್ರೇಲ್ ಕಾರಾಗೃಹಗಳಲ್ಲಿ ಬಂಧಿತರಾಗಿರುವ ಹಲವಾರು ಪ್ಯಾಲೇಸ್ಟಿನಿಯನ್ ಮಹಿಳೆಯರು ಮತ್ತು ಮಕ್ಕಳ ಬಿಡುಗಡೆ ಹಾಗೂ ಗಾಜಾ ಪಟ್ಟಿಯಲ್ಲಿರುವ 50 ನಾಗರೀಕ ಮಹಿಳೆಯರು ಮತ್ತು ಮಕ್ಕಳ ಬಿಡುಗಡೆಯನ್ನು ಒಳಗೊಂಡಿದೆ, ಬಿಡುಗಡೆಯಾದವರ ಸಂಖ್ಯೆಯನ್ನು ನಂತರದ ಹಂತಗಳಲ್ಲಿ ಹೆಚ್ಚಿಸಲಾಗುವುದು ಎಂದು ಹೇಳಿದೆ.

ಒತ್ತೆಯಾಳುಗಳ ಬಿಡುಗಡೆ ಮಾಡುವ ಹಮಾಸ್‌ ನಿರ್ಧಾರ ಸ್ವಾಗತಾರ್ಹ: ಅಮೆರಿಕಾ
ಈ ನಡುವೆ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬಿಡೆನ್ ಅವರು ಪ್ರತಿಕ್ರಿಯೆ ನೀಡಿ, ಗಾಜಾದಲ್ಲಿ ಕನಿಷ್ಠ 50 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಒಪ್ಪಂದವನ್ನು ಸ್ವಾಗತಿಸುತ್ತೇನೆ. ಈ ಒಪ್ಪಂದದಂತೆ ಎಲ್ಲಾ ಅಂಶಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರು, ಗಾಜಾದಲ್ಲಿ ಅಮೆರಿಕನ್ನರು ಸೇರಿದಂತೆ 50 ಮಂದಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದನ್ನು ನಾವು ಸ್ವಾಗತಿಸುತ್ತೇವೆ. ಕತಾರ್ ಮತ್ತು ಈಜಿಪ್ಟ್ ನಾಯಕರ ಮಧ್ಯಸ್ಥಿಕೆಗಾಗಿ ನಾನು ಧನ್ಯವಾದ ಸಲ್ಲಿಸುತ್ತೇನೆ. ಗಾಜಾದಲ್ಲಿರುವ ಪ್ಯಾಲೆಸ್ಟೀನಿಯರಿಗೆ ಮಾನವೀಯ ನೆರವು ತಲುಪಲು ಅನುವು ಮಾಡಿಕೊಡುವ ಉದ್ದೇಶದಿಂದ ಇಸ್ರೇಲ್‌ ಕದನ ವಿರಾಮ ಘೋಷಿಸಿರುವುದನ್ನು ನಾನು ಪ್ರಶಂಸಿಸುತ್ತೇನೆಂದು ಹೇಳಿದ್ದಾರೆ.

No Comments

Leave A Comment