ಪೋಕ್ಸೋ ಪ್ರಕರಣ: 13 ತಿಂಗಳ ನಂತರ ಜೈಲಿನಿಂದ ಮುರುಘಾ ಮಠದ ಶಿವಮೂರ್ತಿ ಸ್ವಾಮಿ ರಿಲೀಸ್
ಚಿತ್ರದುರ್ಗ: ನಗರದ ಹೊರವಲಯದಲ್ಲಿರುವ ಮುರುಘಾ ಮಠದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿದ್ದ ಮುರುಘಾ ಶ್ರೀ ಇಂದು ಜೈಲಿನಿಂದ ಬಿಡುಗಡೆ ಆಗಿದ್ದಾರೆ.
ಕಳೆದ 13 ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾ ಮಠದ ಶಿವಮೂರ್ತಿ ಶರಣರು ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮುರುಘಾ ಶ್ರೀಗಳಿಗೆ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಕಾರಾಗೃಹದಿಂದ ಹೊರಬಂದ ಶರಣರು ಭಕ್ತರ ಕಾರಿನಲ್ಲಿ ಪ್ರಯಾಣ ಬೆಳೆಸಿದರು. ಬಿಡುಗಡೆ ಬಳಿಕ ಚಿತ್ರದುರ್ಗ ಜಿಲ್ಲೆ ಪ್ರವೇಶ ಮಾಡದಂತೆ ಹೈಕೋರ್ಟ್ ಷರತ್ತು ವಿಧಿಸಿದ್ದರಿಂದ ದಾವಣಗೆರೆಯತ್ತ ತೆರಳಿದರು ಎನ್ನಲಾಗಿದೆ.
ಮುರುಘಾ ಶ್ರೀ ವಿರುದ್ಧ ಎರಡು ಪೋಕ್ಸೋ ಪ್ರಕರಣ ದಾಖಲಾಗಿತ್ತು. ನ.8 ರಂದು ಒಂದು ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದರೂ ಎರಡನೇ ಪೋಕ್ಸೋ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಬಾಕಿಯಿದ್ದ ಹಿನ್ನೆಲೆಯಲ್ಲಿ ಬಿಡುಗಡೆಯಾಗಿರಲಿಲ್ಲ. ಈ ಪ್ರಕರಣದ ವಿಚಾರಣೆ ಇಂದು ಮಧ್ಯಾಹ್ನ ನಡೆಯಲಿದೆ.
ಜಾಮೀನು ಆದೇಶ ನೀಡುವ ಚಿತ್ರದುರ್ಗದಲ್ಲಿ ನೆಲೆಸುವಂತಿಲ್ಲ ಎಂದು ಕೋರ್ಟ್ ಷರತ್ತು ವಿಧಿಸಿದ ಹಿನ್ನಲೆಯಲ್ಲಿ ಶ್ರೀಗಳು ಜೈಲಿನಿಂದ ಬಿಡುಗಡೆಯಾದ ಬಳಿಕ ದಾವಣಗೆರೆ ಕಡೆ ಹೊರಟಿದ್ದಾರೆ. ವಿಚಾರಣೆ ಮುಗಿಯುವವರೆಗೂ ಚಿತ್ರದುರ್ಗಕ್ಕೆ ಹೋಗುವಂತಿಲ್ಲ. ಇಬ್ಬರ ಶ್ಯೂರಿಟಿಯನ್ನು ಒದಗಿಸಬೇಕು. ವೀಡಿಯೊ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಾಗಬೇಕು. ಎರಡು ಲಕ್ಷ ರೂ. ಬಾಂಡ್ ಶ್ಯೂರಿಟಿ ನೀಡಬೇಕು. ಪಾಸ್‌ಪೋರ್ಟ್ ಅನ್ನು ಕೋರ್ಟ್ ವಶಕ್ಕೆ ನೀಡಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಇಂತಹ ಕೃತ್ಯ ಪುನರಾವರ್ತನೆಯಾಗಬಾರದು ಎಂದು ಷರತ್ತು ವಿಧಿಸಿದೆ.
ಮುರುಘಾ ಶ್ರೀ ಕಾರಾಗೃಹದಿಂದ ಬಿಡುಗಡೆಯಾದ ಹಿನ್ನೆಲೆ, ಮಠದ ಭಕ್ತರು, ಅಭಿಮಾನಿಗಳು ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಅಲ್ಲದೆ ಇದೇ ವೇಳೆ ಶ್ರೀಗಳ ಪರ ಘೋಷಣೆ ಕೂಗಿ, ಜೈಕಾರ ಹಾಕಿದರು.
ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ದಾಖಲಾದ ಪ್ರಕರಣದಲ್ಲಿ ಶಿವಮೂರ್ತಿ ಶರಣರಿಗೆ ಹೈಕೋರ್ಟ್ ನ.8ರಂದು ಜಾಮೀನು ನೀಡಿತ್ತು. ಜಾಮೀನು ಆದೇಶದ ಮೇರೆಗೆ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಬಿಡುಗಡೆ ಆದೇಶ ಹೊರಡಿಸಿತ್ತು. ಈ ಆದೇಶ ಕಾರಗೃಹ ತಲುಪುವುದು ವಿಳಂಬವಾಗಿದ್ದರಿಂದ ಬುಧವಾರ ಬಿಡುಗಡೆ ಆಗಿರಲಿಲ್ಲ.