ಪಿ ಬಿ ಆಚಾರ್ಯ ಎಂದೇ ಪ್ರಸಿದ್ದರಾಗಿದ್ದ ಪದ್ಮನಾಭ ಬಾಲಕೃಷ್ಣ ಆಚಾರ್ಯ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್), ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಬಿಜೆಪಿಗೆ ಸೇವೆ ಸಲ್ಲಿಸಿದ ಹಿರಿಯ ನಾಯಕರಾಗಿದ್ದರು. ಮಾರ್ಗರೆಟ್ ಆಳ್ವಾ ನಂತರ ರಾಜ್ಯಪಾಲ ಹುದ್ದೆಗೆ ಆಯ್ಕೆಯಾದ ಕರಾವಳಿ ಕರ್ನಾಟಕದ ಎರಡನೇ ಮತ್ತು ಜಿಎಸ್‌ಬಿ ಸಮುದಾಯದಿಂದ ಮೊದಲಿಗರು ಆಗಿದ್ದರು.
ಬಾಲಕೃಷ್ಣ ಮತ್ತು ರಾಧಾ ಆಚಾರ್ಯ ಅವರ ಪುತ್ರರಾಗಿದ್ದ ಪಿಬಿ ಆಚಾರ್ಯ, ಅವರು ಎಂ ಜಿ ಎಂ ಕಾಲೇಜಿನ ಪ್ರಥಮ ಬ್ಯಾಚ್ ನ ವಿದ್ಯಾರ್ಥಿಯಾಗಿದ್ದರು (1948-50). ಕಾಡಬೆಟ್ಟುವಿನಲ್ಲಿ ಆರ್‌ಎಸ್‌ಎಸ್ ವಿದ್ಯಾರಣ್ಯ ಘಟಕದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಆರ್‌ಎಸ್‌ಎಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದ ಆಚಾರ್ಯ ಅವರು ಆರ್‌ಎಸ್‌ಎಸ್ ನಿಷೇಧವಾದ ಸಂದರ್ಭ 1948 ರಲ್ಲಿ ಆರು ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದರು.
1995 ಮತ್ತು 2001 ರ ನಡುವೆ ನರೇಂದ್ರ ಮೋದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಪದ್ಮನಾಭ ಆಚಾರ್ಯ ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ರಾಜ್ಯಪಾಲರಾಗುವ ಮೊದಲು ಅವರು ಭಾರತೀಯ ಜನತಾ ಪಕ್ಷದಲ್ಲಿ (ಬಿಜೆಪಿ) ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ನಾಗಾಲ್ಯಾಂಡ್, ತ್ರಿಪುರಾ, ಅಸ್ಸಾಂ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಮಣಿಪುರ ಮತ್ತು ಅರುಣಾಚಲ ಪ್ರದೇಶದ ಪ್ರಭಾರ ರಾಜ್ಯಪಾಲರಾಗಿಯೂ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.