ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಸದನದಲ್ಲಿ ಪ್ರಶ್ನೆ ಕೇಳಲು ಹಣ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉಚ್ಛಾಟನೆಗೆ ಲೋಕಸಭೆಯ ನೈತಿಕ ಸಮಿತಿ ಶಿಫಾರಸು
ನವದೆಹಲಿ: ಸದನದಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಲೋಕಸಭೆಯ ನೈತಿಕ ಸಮಿತಿಯು ಗುರುವಾರ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸದನದಿಂದ ಉಚ್ಛಾಟಿಸಲು ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್ ನೇತೃತ್ವದ ಸಮಿತಿಯು ಇಲ್ಲಿ ಸಭೆ ಸೇರಿ, ತನ್ನ ವರದಿಯನ್ನು ಅಂಗೀಕರಿಸಿ ಮಹುವಾರನ್ನು ಉಚ್ಚಾಟಿಸುವಂತೆ ಶಿಫಾರಸು ಮಾಡಿದೆ ಎನ್ನಲಾಗಿದೆ.
ನೈತಿಕ ಸಮಿತಿಯ ಒಟ್ಟು 10 ಮಂದಿಯಲ್ಲಿ ಆರು ಸದಸ್ಯರು ವರದಿಯನ್ನು ಅಂಗೀಕರಿಸುವುದನ್ನು ಬೆಂಬಲಿಸಿದ್ದಾರೆ ಮತ್ತು ಉಳಿದ ನಾಲ್ವರು ಅದನ್ನು ವಿರೋಧಿಸಿದರು ಎಂದು ಸಭೆಯ ನಂತರ ಸೋಂಕರ್ ಸುದ್ದಿಗಾರರಿಗೆ ತಿಳಿಸಿದರು.
ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸುವಂತೆ ಸಮಿತಿ ಶಿಫಾರಸು ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮಕ್ಕಾಗಿ ವರದಿಯನ್ನು ಈಗ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಈ ಸಭೆಯ ನಂತರ, ನಾಲ್ವರು ವಿರೋಧ ಪಕ್ಷದ ಸದಸ್ಯರು ಸಮಿತಿಯ ಶಿಫಾರಸು ‘ಪೂರ್ವಾಗ್ರಹ ಪೀಡಿತ’ ಮತ್ತು ‘ತಪ್ಪು’ ಎಂದು ಹೇಳಿದ್ದಾರೆ.
ಸಮಿತಿಯು ಮಹುವಾ ಮೊಯಿತ್ರಾ ಹಾಗೂ ಸದನದಲ್ಲಿ ಪ್ರಶ್ನೆ ಕೇಳಲು ಉದ್ಯಮಿಯೊಬ್ಬರಿಂದ ಹಣ ಪಡೆದಿದ್ದಾರೆ ಎಂದು ಆರೋಪಿಸಿ ಲೋಕಸಭಾ ಸ್ಪೀಕರ್ ಓಂ ಸ್ಪೀಕರ್ ಬಿರ್ಲಾ ಅವರಿಗೆ ದೂರು ದಾಖಲಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ಅವರನ್ನು ಈ ಹಿಂದೆ ವಿಚಾರಣೆ ನಡೆಸಿತ್ತು.
ಏನಿದು ಪ್ರಕರಣ?
ಮಹುವಾ ಮೊಯಿತ್ರಾ ಅವರು ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿಯೊಬ್ಬರಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು, ಈ ಬಗ್ಗೆ ತನಿಖಾ ಸಮತಿ ರಚನೆ ಮಾಡಬೇಕು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಿದ್ದರು.
ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಹೀರಾನಂದಾನಿ ಸಮೂಹದ ಸಿಇಒ ದರ್ಶನ್ ಹೀರಾನಂದಾನಿ ಅವರಿಂದ ಮಹುವಾ ಅವರು ಲಂಚ ಪಡೆದಿದ್ದಾರೆ. ಇತ್ತೀಚೆಗೆ ಲೋಕಸಭೆಯಲ್ಲಿ ಮೊಯಿತ್ರಾ ಅವರು ಕೇಳಿರುವ 61 ಪ್ರಶ್ನೆಗಳಲ್ಲಿ 50 ಪ್ರಶ್ನೆಗಳು ಅದಾನಿ ಗ್ರೂಪ್‌ನ ಮೇಲೆ ಕೇಂದ್ರೀಕೃತವಾಗಿವೆ. ಪ್ರತಿಸ್ಪರ್ಧಿ ಉದ್ಯಮಿಯೊಬ್ಬರ ಇಚ್ಛೆಯ ಮೇರೆಗೆ ಟಿಎಂಸಿ ಸಂಸದೆ ಅದಾನಿ ಗ್ರೂಪ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ದುಬೆ ಅಕ್ಟೋಬರ್ 15ರಂದು ಸ್ಪೀಕರ್‌ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ದೂರಿದ್ದರು.
ದುಬೆ ಅವರ ದೂರನ್ನು ಸ್ಪೀಕರ್, ಸಂಸತ್ತಿನ ನೈತಿಕ ಸಮಿತಿಗೆ ಒಪ್ಪಿಸಿದ್ದರು. ಆದರೆ, ಈ ಆರೋಪಗಳನ್ನು ಮಹುವಾ ಮೊಯಿತ್ರಾ ನಿರಾಕರಿಸಿದ್ದಾರೆ.