Log In
BREAKING NEWS >
``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ; ಆರೋಪಿ ಸಂತೋಷ್ ರಾವ್ ಖುಲಾಸೆ ವಿರುದ್ಧ ಮೇಲ್ಮನವಿ ಸಲ್ಲಿಸಿದ ಸಿಬಿಐ

ಬೆಂಗಳೂರು: ಧರ್ಮಸ್ಥಳ ಸಮೀಪದ ಪಾಂಗಾಳದಲ್ಲಿ 2012ರಲ್ಲಿ ನಡೆದ ತೀವ್ರ ಸಂಚಲನ ಮೂಡಿಸಿದ್ದ 17 ವರ್ಷದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸಿಬಿಐ ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

ಸಿಬಿಐ ವಿಶೇಷ ನ್ಯಾಯಾಲಯವು ಜುಲೈ 16 ರಂದು ಆರೋಪಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿತ್ತು ಮತ್ತು ಪ್ರಕರಣದಲ್ಲಿ ಅವರನ್ನು ಬಂಧಿಸಿದ್ದಕ್ಕಾಗಿ ತನಿಖಾಧಿಕಾರಿ ಮತ್ತು ಪ್ರಾಸಿಕ್ಯೂಷನ್ ಅನ್ನು ತರಾಟೆಗೆ ತೆಗೆದುಕೊಂಡಿತ್ತು. ತನಿಖೆಗೆ ಅಡ್ಡಿಪಡಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿತ್ತು.

ಈ ತೀರ್ಪಿನ ನಾಲ್ಕು ತಿಂಗಳ ನಂತರ ಸಿಬಿಐ ಮೇಲ್ಮನವಿ ಸಲ್ಲಿಸಿದೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಿಬಿಐಗೆ ಕೆಳ ನ್ಯಾಯಾಲಯವು 60 ದಿನಗಳ ಕಾಲಾವಕಾಶ ನೀಡಿತ್ತು.

ಸದ್ಯ ಸಿಬಿಐ ಸಲ್ಲಿಸಿರುವ ಮೇಲ್ಮನವಿಯನ್ನು ಹೈಕೋರ್ಟ್‌ ಅಂಗೀಕರಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಕರಣದಲ್ಲಿ ಖುಲಾಸೆಗೊಂಡಿರುವ ಸಂತೋಷ್ ರಾವ್ ಅವರೇ ನಿಜವಾದ ಅಪರಾಧಿ ಎಂದು ಸಿಬಿಐ ಹೇಳಿಕೊಂಡಿದ್ದು, ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಅಗತ್ಯ ಸಾಕ್ಷ್ಯಾಧಾರಗಳನ್ನು ಸಲ್ಲಿಸುವುದಾಗಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿ ಕುಟುಂಬದವರ ಪಾತ್ರವಿದ್ದು, ನಿಜವಾದ ಆರೋಪಿಗಳನ್ನು ರಕ್ಷಿಸುವಲ್ಲಿ ಬಿಜೆಪಿ ಮುಖಂಡರೊಬ್ಬರ ಕೈವಾಡವಿದೆ ಎಂಬ ಆರೋಪಗಳು ಕೇಳಿಬಂದಿದ್ದರಿಂದ ಪ್ರಕರಣವು ರಾಜಕೀಯ ತಿರುವು ಪಡೆದುಕೊಂಡಿತ್ತು.

ಈ ಪ್ರಕರಣದ ಮರುತನಿಖೆ ಹಾಗೂ ನಿಜವಾದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕರಾವಳಿ ಕರ್ನಾಟಕದಲ್ಲಿ ಜನರು ಬೃಹತ್ ಹೋರಾಟಗಳನ್ನು ನಡೆಸುತ್ತಿದ್ದಾರೆ. ಧರ್ಮಾಧಿಕಾರಿ ಕುಟುಂಬದ ಬೆಂಬಲಿಗರು ಮತ್ತು ಬಿಜೆಪಿ ರಾಜಕಾರಣಿಗಳು ಸಹ ಬೃಹತ್ ರ್ಯಾಲಿಗಳನ್ನು ನಡೆಸುತ್ತಿದ್ದು, ಇದು ಹಿಂದೂ ಯಾತ್ರಾ ಕೇಂದ್ರದ ಮೇಲಿನ ದಾಳಿ ಎಂದು ಹೇಳುತ್ತಿದ್ದಾರೆ.

ಸೌಜನ್ಯ ಪ್ರಕರಣದ ಮರುತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಹೈಕೋರ್ಟ್ ಈ ಹಿಂದೆ (ಸೆಪ್ಟಂಬರ್ 9) ತಿರಸ್ಕರಿಸಿತ್ತು ಮತ್ತು ಸಂತ್ರಸ್ತ ಕುಟುಂಬವು ಆರೋಪಿಯನ್ನು ದೋಷಮುಕ್ತಗೊಳಿಸಿದ ವಿಚಾರಣಾಧೀನ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಒತ್ತಿ ಹೇಳಿತ್ತು. ಆದರೆ, ಸಂತ್ರಸ್ತೆಯ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿರಲಿಲ್ಲ.

2012ರ ಅಕ್ಟೋಬರ್ 10ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಹಿಂದೂ ಯಾತ್ರಾ ಕೇಂದ್ರವಾದ ಧರ್ಮಸ್ಥಳ ಬಳಿಯ ಪಾಂಗಾಳದಲ್ಲಿ ಅಪ್ರಾಪ್ತೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು.

ಶ್ರೀ ಧರ್ಮಸ್ಥಳ ಮಂಜುನಾಥ ಕಾಲೇಜಿನಲ್ಲಿ 12ನೇ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಲಾಗಿತ್ತು. ತರಗತಿಯನ್ನು ಮುಗಿಸಿ ಆಕೆಯ ಮನೆಯ ಕಡೆಗೆ ಹೋಗುತ್ತಿದ್ದಾಗ ಆಕೆಯನ್ನು ಅಪಹರಿಸಲಾಗಿತ್ತು ಮತ್ತು ನಂತರ ಆಕೆಯ ಮೃತದೇಹವು ವಿವಸ್ತ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

No Comments

Leave A Comment