Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲೇ ಸದಾಶಿವ ಆಯೋಗದ ವರದಿ ಮಂಡಿಸಲು ಸಿಎಂಗೆ ಮನವಿ: ಜಿ ಪರಮೇಶ್ವರ

ಬೆಂಗಳೂರು: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿಯೇ ಎಜೆ ಸದಾಶಿವ ಆಯೋಗದ ವರದಿ ಮಂಡಿಸಿ ಒಳ ಮೀಸಲಾತಿ ಕಲ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಮಂಗಳವಾರ ತಿಳಿಸಿದ್ದಾರೆ.

ಒಳ ಮೀಸಲಾತಿ ಸಂಬಂಧ ಸದಾಶಿವ ಆಯೋಗದ ವರದಿ ಜಾರಿ ಕುರಿತಂತೆ ಪರಿಶಿಷ್ಟ ಜಾತಿಗೆ ಸೇರಿದ ಸಚಿವರು ಮತ್ತು ಶಾಸಕರು ನಡೆಸಿದ ಸಭೆ ಬಳಿಕ ಅವರು ಮಾತನಾಡಿದರು.

‘ಚುನಾವಣೆ ಸಂದರ್ಭದಲ್ಲಿ ಒಳ ಮೀಸಲಾತಿ ಕುರಿತು ಚಿತ್ರದುರ್ಗ ನಗರದಲ್ಲಿ ಎಸ್‌ಸಿ-ಎಸ್‌ಟಿ ಸಮಾವೇಶ ನಡೆಸಲಾಗಿತ್ತು. ಆಗ ಹತ್ತು ಹಲವು ಘೋಷಣೆಗಳನ್ನು ಮಾಡಿದ್ದೆವು. ಅದರಲ್ಲಿ ಸದಾಶಿವ ಆಯೋಗದ ವರದಿಯನ್ನು ಮೊದಲ ಅಧಿವೇಶನದಲ್ಲಿಯೇ ಸದನದ ಮುಂದಿಡಲಾಗುವುದು ಎಂದು ಭರವಸೆ ನೀಡಲಾಯಿತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ’ ಎಂದು ಹೇಳಿದರು.

ಸಮಾಜ ಕಲ್ಯಾಣ ಸಚಿವ ಡಾ. ಎಚ್‌ಸಿ ಮಹದೇವಪ್ಪ, ಆಹಾರ ಸಚಿವ ಕೆಎಚ್ ಮುನಿಯಪ್ಪ, ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ನಮ್ಮಲ್ಲಿ ಕೆಲವರು ಈ ವಿಷಯವನ್ನು ಸಿಎಂ ಗಮನಕ್ಕೆ ತಂದಿದ್ದೇವೆ. ಈ ಬಗ್ಗೆ ಸಮಾಜದ ಮುಖಂಡರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ನ್ಯಾ. ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ವಿಚಾರವಾಗಿ ತೀವ್ರ ಸ್ವರೂಪದ ಹೋರಾಟ ನಡೆಸಿ, ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮಾದಿಗ ಸಮುದಾಯದ ಮುಖಂಡರಿಗೆ ಆಹಾರ ಇಲಾಖೆ ಸಚಿವ ಕೆಹೆಚ್ ಮುನಿಯಪ್ಪ ಸೋಮವಾರ ಕರೆ ನೀಡಿದ್ದಾರೆ.

ಸದಾಶಿವ ಆಯೋಗದ ಶಿಫಾರಸು ಜಾರಿಗಾಗಿ ತೀವ್ರ ಆಂದೋಲನದ ಅಗತ್ಯವಿದೆ. ನಿಮ್ಮ ಸ್ಥಳೀಯ ಶಾಸಕರ ಮನೆಗೆ ಮುತ್ತಿಗೆ ಹಾಕಿ. ಅವರಿಗೆ ಕಾರ್ಯಕ್ರಮಗಳನ್ನು ನಡೆಸಲು ಬಿಡಬೇಡಿ. ಸಚಿವನಾಗಿದ್ದುಕೊಂಡೇ ನಾನು ನಿಮಗೆ ಈ ರೀತಿ ಹೇಳುತ್ತಿದ್ದೇನೆ. ಹೀಗೆ ಹೇಳುವ ಸಂದರ್ಭ ಬಂದಿದೆ ಎಂದು ಕರ್ನಾಟಕ ಆದಿಜಾಂಬವ ಸಾಂಸ್ಕೃತಿಕ ಸಮಿತಿಯ ಮುಖಂಡರ ಸಭೆಯಲ್ಲಿ ಮುನಿಯಪ್ಪ ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

No Comments

Leave A Comment