ಬೆಂಗಳೂರು: ಸಹಜೀವನ ನಡೆಸುತ್ತಿದ್ದ ವಿವಾಹಿತ ಮಹಿಳೆ ಮತ್ತಾಕೆಯ ಪ್ರೇಮಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
ಬೆಂಗಳೂರು: ತಮ್ಮ ಪ್ರೀತಿಗೆ ಕುಟುಂಬದವರಿಂದ ವಿರೋಧದ ಹಿನ್ನೆಲೆಯಲ್ಲಿ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ (ವಿವಾಹಿತೆ) ಹಾಗೂ ಆಕೆಯ ಗೆಳೆಯ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ 20 ವರ್ಷದ ವಿವಾಹಿತ ಮಹಿಳೆ ಮತ್ತು ಆಕೆಯ 29 ವರ್ಷದ ವಿವ್-ಇನ್ ಪಾಲುದಾರ ಭಾನುವಾರ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಕರಿಯಮ್ಮ ಅಗ್ರಹಾರ ನಿವಾಸಿ ಸೌಮಿನಿ ದಾಸ್ ಹಾಗೂ ಅಭಿಲ್ ಅಬ್ರಾಹಂ ಮೃತ ದುರ್ದೈವಿಗಳು.
ಮೃತ ಸೌಮಿನಿ ದಾಸ್ ಪಶ್ಚಿಮ ಬಂಗಾಳ ರಾಜ್ಯದವರಾಗಿದ್ದ, ಕರಿಯಮ್ಮ ಅಗ್ರಹಾರ ಸಮೀಪದ ಖಾಸಗಿ ಕಾಲೇಜಿನಲ್ಲಿ 2ನೇ ವರ್ಷದ ನರ್ಸಿಂಗ್ ಓದುತ್ತಿದ್ದಳು. ಎರಡು ವರ್ಷಗಳ ಹಿಂದೆಯೇ ಆಕೆಗೆ ವಿವಾಹವಾಗಿತ್ತು. ಇನ್ನು ನರ್ಸ್ ಸರ್ವೀಸ್ ಏಜೆನ್ಸಿ ನಡೆಸುತ್ತಿದ್ದ ಕೇರಳ ಮೂಲದ ಅಬ್ರಾಹಂಗೆ ಕೆಲ ತಿಂಗಳ ಹಿಂದೆ ಸೌಮಿನಿ ದಾಸ್‌ಗೆ ಪರಿಚಯವಾಗಿದೆ. ಕಾಲೇಜಿಗೆ ರಜೆ ಅಥವಾ ಬಿಡುವಿನ ವೇಳೆಯಲ್ಲಿ ಅಬ್ರಾಹಂ ಏಜೆನ್ಸಿಯಲ್ಲಿ ಸೌಮಿನಿ ದಾಸ್ ಕೆಲಸ ಮಾಡುತ್ತಿದ್ದಳು. ಮೂರು ತಿಂಗಳ ಹಿಂದೆ ತಮ್ಮ ಪತಿಗೆ ಅಬ್ರಾಹಂನನ್ನು ತಾವು ಒಂದೇ ಏಜೆನ್ಸಿಯಲ್ಲಿ ಕೆಲಸ ಮಾಡುತ್ತೇವೆ ಎಂದು ಆಕೆ ಪರಿಚಯಿಸಿದ್ದಳು.
ಮೂರು ತಿಂಗಳ ಹಿಂದೆಯಷ್ಟೇ ತಮ್ಮೂರಿಗೆ ಹೋಗಿದ್ದ ಸೌಮಿನಿ, ಪುನಃ ಬೆಂಗಳೂರಿಗೆ ವಾಪಸು ಬಂದಿದ್ದರು. ಇತ್ತೀಚೆಗೆ ಪತಿ ಜೊತೆ ಮಾತನಾಡಿದ್ದ ಅವರು, ಮದುವೆಯಾದ ದಿನದಿಂದಲೂ ನೀನು ನನಗೆ ಕಿರುಕುಳ ನೀಡುತ್ತಿದ್ದಿಯಾ. ನಿನ್ನ ಜೊತೆ ನಾನು ಇರುವುದಿಲ್ಲ. ನನ್ನ ತಂಟೆಗೆ ಬರಬೇಡ. ನಾನು ಊರಿಗೂ ಬರುವುದಿಲ್ಲ ಎಂದಿದ್ದರೆಂದು ಹೇಳಲಾಗುತ್ತಿದೆ.
ಸೌಮಿನಿ ಬಗ್ಗೆ ಅನುಮಾನಗೊಂಡಿದ್ದ ಪತಿ, ಅವರ ಬಗ್ಗೆ ವಿಚಾರಿಸಿದ್ದರು. ಅಬಿಲ್ ಜೊತೆ ಸೌಮಿನಿ ಸಹಜೀವನ ನಡೆಸುತ್ತಿದ್ದ ಸಂಗತಿ ಗೊತ್ತಾಗಿತ್ತು. ಈ ಬಗ್ಗೆ ಪತ್ನಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ನಮ್ಮ ಪ್ರೀತಿಯ ವಿಷಯ ಬೇರೆಯವರಿಗೆ ಗೊತ್ತಾಗಿದೆ. ನಮ್ಮನ್ನು ಬದುಕಲು ಬಿಡುವುದಿಲ್ಲ ಎಂದು ತಿಳಿದ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಬೆಂಕಿ ಹಚ್ಚಿಕೊಂಡಿದ್ದ ಸಂದರ್ಭದಲ್ಲಿ ಇಬ್ಬರೂ ಕೂಗಾಡಿದ್ದರು. ಸ್ಥಳೀಯರು ಸಹಾಯಕ್ಕೆ ಹೋಗಿದ್ದರು. ಅಷ್ಟರಲ್ಲೇ ಇಬ್ಬರ ದೇಹ ಬಹುಪಾಲು ಸುಟ್ಟಿತ್ತು. ಸೌಮಿನಿ ದಾಸ್ ಸ್ಥಳದಲ್ಲೇ ಮೃತಪಟ್ಟಿದ್ದರು. ಉಸಿರಾಡುತ್ತಿದ್ದ ಅಬಿಲ್ ಅವರನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಯೇ ಅವರು ಮೃತಪಟ್ಟರು ಎಂದು ತಿಳಿಸಿವೆ.
ಸೌಮಿನಿ ಮತ್ತು ಅಬ್ರಹಾಂ ಅವರ ಮೊಬೈಲ್‌ಗಳು ಲಾಕ್ ಆಗಿದ್ದು, ಸೈಬರ್ ತಜ್ಞರ ಸಹಾಯದಿಂದ ಅವುಗಳನ್ನು ತೆರೆಯಬೇಕಾಗಿದೆ. ಅಬ್ರಹಾಂ ಅವರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿರುವ ಮಹಿಳೆಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.