ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾರತ ಕ್ರಿಕೆಟ್ ತಂಡ ಅದ್ಭುತ ಪ್ರದರ್ಶನ ನೀಡಿ ಸೆಮಿ ಫೈನಲ್ಗೆ ಲಗ್ಗೆಯಿಟ್ಟಿರುವ ಸಂದರ್ಭ ದೊಡ್ಡ ಆಘಾತ ಉಂಟಾಗಿದೆ. ಗಾಯದಿಂದ ಬಳಲುತ್ತಿರುವ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಆಲ್ ರೌಂಡರ್ ಹಾಗೂ ಉಪನಾಯಕ ಹಾರ್ದಿಕ್ ಪಾಂಡ್ಯ ಅವರು ಗಾಯದಿಂದ ಚೇತರಿಸಿಕೊಳ್ಳದ ಕಾರಣ ಅವರ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗ ಪ್ರಸಿದ್ಧ್ ಕೃಷ್ಣ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಹೀಗಾಗಿ ಬಲಿಷ್ಠ ಸೌತ್ ಆಫ್ರಿಕಾ ತಂಡದ ವಿರುದ್ಧದ ಮ್ಯಾಚ್ನಲ್ಲಿ ಕೃಷ್ಣ ಬೌಲಿಂಗ್ ಮಾಡಲಿದ್ದಾರೆ ಎನ್ನಲಾಗಿದೆ. ಕಳೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಗಾಯಕ್ಕೆ ತುತ್ತಾಗಿದ್ದರು.
ಈಗಾಗಲೇ ಭಾರತ ತಂಡದಲ್ಲಿ 17 ಪಂದ್ಯಗಳನ್ನು ಆಡಿರುವ ಪ್ರಸಿದ್ಧ್ ಕೃಷ್ಣ 29 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರಿಗೆ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾಗ್ಯ ಒಲಿದು ಬಂದಿರುವುದು ವಿಶೇಷವಾಗಿದೆ. ಅಲ್ಲದೇ ಕರ್ನಾಟಕದ ಕೆ.ಎಲ್ ರಾಹುಲ್ ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಕೃಷ್ಣ ಅವರು ತಂಡಕ್ಕೆ ಸೇರಿಕೊಂಡರೆ ಈ ಬಾರಿ ಇಬ್ಬರು ಕನ್ನಡಿಗರು ಭಾರತ ತಂಡವನ್ನು ಪ್ರತಿನಿಧಿಸಿದಂತೆ ಆಗುತ್ತದೆ.
ಹಾರ್ದಿಕ್ ಪಾಂಡ್ಯ ಅವರು ಚಿಕಿತ್ಸೆಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (NCA) ತೆರಳಿದ್ದರು. ವರದಿಯಲ್ಲಿ ಪಾಂಡ್ಯ ಕಾಲಿನಲ್ಲಿ ಯಾವುದೇ ಮುರಿತ ಕಂಡುಬರದಿದ್ದರೂ, ಕೆಲವು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಂಡರೆ ಉತ್ತಮ ಎಂಬ ಮಾತು ಬಿಸಿಸಿಐ ಮೂಲಗಳಿಂದ ಬಂದಿತ್ತು. ಅಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧ ಅಥವಾ ಸೆಮಿ ಫೈನಲ್ನ ಪಂದ್ಯಕ್ಕೆ ಲಭ್ಯರಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಗಾಯದ ಪ್ರಮಾಣ ದೊಡ್ಡದಿರುವ ಕಾರಣ ಹಾಗೂ ಚೇತರಿಸಿಕೊಳ್ಳಲು ಇನ್ನೂ ಸಮಯ ಬೇಕಾಗಿರುವುದರಿಂದ ಪಾಂಡ್ಯ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಭಾನುವಾರ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯ ಕೋಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆಯೋಜಿಸಲಾಗಿದೆ. ಇದೇ ದಿನ ವಿರಾಟ್ ಕೊಹ್ಲಿಯ ಹುಟ್ಟುಹಬ್ಬ ಕೂಡ ಆಗಿರುವುದರಿಂದ, ಈ ಪಂದ್ಯ ಸಾಕಷ್ಟು ವಿಶೇಷತೆಯಿಂದ ಕೂಡಿರಲಿದೆ.