Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಮಂಗಳೂರು: ಸಾಂಪ್ರದಾಯಿಕ ಮರಳುಗಾರಿಕೆಆರಂಭಕ್ಕೆ ಸರ್ಕಾರದಿಂದ ವಿಳಂಬ ನೀತಿ:ಕಾಮತ್ ಆರೋಪ

ಮಂಗಳೂರು:ನ.3: ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತಗೊಂಡು ಹಲವು ತಿಂಗಳುಗಳೇ ಕಳೆದಿವೆ. ಈ ಬಾರಿಯ ಸರ್ವೆಯಲ್ಲಿ ನೇತ್ರಾವತಿ ಹಾಗೂ ಫಲ್ಗುಣಿ ನದಿಯಲ್ಲಿ ಮರಳು ದಿಬ್ಬಗಳನ್ನು ಹೊಸದಾಗಿ ಗುರುತಿಸಿಲಾಗಿದೆ. ಈ ಕುರಿತ ವರದಿಯನ್ನು ಜಿಲ್ಲಾಡಳಿತದ ಹಂತದಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಪೂರೈಸಿ ವರದಿಯನ್ನು ಕೆಸಿಝಡ್‌ಎಂಎ ಗೆ ಕಳುಹಿಸಲಾಗಿದ್ದರೂ ನಿಗದಿತ ಸಮಯದೊಳಗೆ ಸಭೆ ನಡೆಸಿ ಅನುಮತಿ ನೀಡದೇ ಅನಗತ್ಯ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ಶೀಘ್ರದಲ್ಲಿ ಆರಂಭಗೊಳ್ಳದಿದ್ದರೆ ಮರಳು ಕೊರತೆಯಿಂದಾಗಿ ನಿರ್ಮಾಣ ಚಟುವಟಿಕೆಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಸಹಜವಾಗಿ ಇದನ್ನೇ ನಂಬಿ ಬದುಕು ನಡೆಸುವ ಕಾರ್ಮಿಕ ಕುಟುಂಬಗಳು ಅತೀವ ಸಂಕಷ್ಟ ಎದುರಿಸಲಿವೆ. ಈಗಾಗಲೇ ದುಬಾರಿ ದರದಿಂದಾಗಿ ಜನಸಾಮಾನ್ಯರಿಗೆ ಮರಳು ಖರೀದಿಸಲೂ ಆಗುತ್ತಿಲ್ಲ. ಜಿಲ್ಲೆಯ ಜನತೆಯ ಈ ಸಂಕಷ್ಟಕ್ಕೆ ರಾಜ್ಯ ಸರಕಾರದ ನಿರ್ಲಕ್ಷ್ಯ, ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನವೇ ನೇರ ಕಾರಣ. ಕೂಡಲೇ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಕೊರತೆ:
ನಮ್ಮ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಮಹಾತ್ಮ ಗಾಂಧಿ ನಗರ ವಿಕಾಸ್ ಯೋಜನೆಯಡಿಯಲ್ಲಿ 125 ಕೋಟಿ ಅನುದಾನವನ್ನು ತರಲಾಗಿತ್ತು. ಮಳೆ ಹಾನಿಯಿಂದ ಕ್ಷೇತ್ರದ ಅಲ್ಲಲ್ಲಿ ರಸ್ತೆ, ಡ್ರೈನೇಜ್ ನಲ್ಲಿ ಸಮಸ್ಯೆ ಉಂಟಾಗಿದ್ದರಿಂದ ಮೂಲಭೂತ ಸೌಕರ್ಯ ಮರು ಕಲ್ಪಿಸಲು 20 ಕೋಟಿ ವಿಶೇಷ ಅನುದಾನವನ್ನು ತರಲಾಗಿತ್ತು. ಪ್ರಸ್ತುತ ಈ ಎಲ್ಲ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಇಂದಿನ ಸರಕಾರ ಅನುದಾನಗಳನ್ನು ತಡೆಹಿಡಿದ ಪರಿಣಾಮ ಕ್ಷೇತ್ರದ ರಸ್ತೆಗಳ, ಚರಂಡಿಗಳ ಕಾಮಗಾರಿಗಳು ಅರ್ಧಕ್ಕೆ ನಿಂತು ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ

ಇದಲ್ಲದೇ ನಮ್ಮ ಸರ್ಕಾರದ ಅವಧಿಯಲ್ಲಿ ಅಮೃತ ಯೋಜನೆ ಅಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರ್ಕಾರ ವತಿಯಿಂದ ಹಲವು ಅನುದಾನಗಳನ್ನು ತರಲಾಗಿತ್ತು. ಕುಡ್ಸೆಂಪ್ ಮೂಲಕ 200 ಕೋಟಿಗೂ ಹೆಚ್ಚು ಅನುದಾನ ತರಲಾಗಿದ್ದರೂ ಪ್ರಸ್ತುತ ಡ್ರೈನೇಜ್ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಈ ಬಗ್ಗೆ ಇಲಾಖೆಗೆ ಹಾಗೂ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಇನ್ನೂ ಸಹ ಯಾವುದೇ ಪ್ರಗತಿ ಕಂಡಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ 792 ಕೋಟಿ ರೂಪಾಯಿಯ ಕುಡಿಯುವ ನೀರಿನ ಜಲಸಿರಿ ಯೋಜನೆ ಕಾಮಗಾರಿ ಅರ್ಧಕ್ಕೆ ನಿಂತಿದೆ.

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 6 ತಿಂಗಳಾದರೂ ಕಾಮಗಾರಿಗೆ ಅಗತ್ಯವಿರುವ ಅನುದಾನಕ್ಕೆ ಸರ್ಕಾರದಿಂದ ಸೂಕ್ತ ಸ್ಪಂದನೆಯೇ ದೊರಕುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಯಾವುದೇ ಹೊಸ ಕಾಮಗಾರಿಗೆ ಅನುದಾನ ಸಿಗುತ್ತಿಲ್ಲ. ಈ ಹಿಂದಿನ ಕಾಮಗಾರಿಗಳಿಗೆ ಈಗಾಗಲೇ ನಿಯೋಜನೆಗೊಂಡ ಅನುದಾನವನ್ನೂ ಸಹ ಬಿಡುಗಡೆ ಮಾಡುತ್ತಿಲ್ಲ. ಹೀಗಾದರೆ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ.?

ಒಟ್ಟಾರೆಯಾಗಿ ಸರ್ಕಾರ ಕರಾವಳಿಯಲ್ಲಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ ಹಾಗೂ ಇಲ್ಲಿನ ಜನರು ಬಿಜೆಪಿಯ ಶಾಸಕರನ್ನು ಗೆಲ್ಲಿಸಿದ್ದಕ್ಕಾಗಿ ಸರ್ಕಾರ ಈ ರೀತಿಯಾಗಿ ವರ್ತಿಸುತ್ತಿದೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದಾಗ ಇದರಲ್ಲಿ ಏನೋ ಷಡ್ಯಂತ್ರ ಇರುವ ಹಾಗೆ ಅನುಮಾನ ಮೂಡುತ್ತಿದೆ. ಹಾಗಾಗಿ ಈ ಕೂಡಲೇ ಎಲ್ಲಾ ಅನುದಾನಗಳನ್ನು ಬಿಡುಗಡೆಗೊಳಿಸಿ ಕಾಮಗಾರಿ ಮುಂದುವರಿಸಲು ಆದೇಶ ನೀಡಬೇಕು ಎಂದು ಈ ಮೂಲಕ ಆಗ್ರಹಿಸಿದರು.

No Comments

Leave A Comment