68ನೇ ಕನ್ನಡ ರಾಜ್ಯೋತ್ಸವ: ಸಿಎಂ ಸಿದ್ದರಾಮಯ್ಯರಿಂದ ಬಂಪರ್ ಗಿಫ್ಟ್ ಘೋಷಣೆ, ಇಂದಿನಿಂದ ಸರ್ಕಾರಿ ಶಾಲೆಗಳಿಗೂ ಸಿಗಲಿದೆ ಉಚಿತ ವಿದ್ಯುತ್ ಭಾಗ್ಯ!
ಬೆಂಗಳೂರು: 68ನೇ ಕನ್ನಡ ರಾಜ್ಯೋತ್ಸವ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಶಾಲೆಗೆ ಬಂಪರ್ ಗಿಫ್ಟ್ ಘೋಷಣೆ ಮಾಡಿದ್ದಾರೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರು ನೀಡುವುದಾಗಿ ಘೋಷಿಸಿದ್ದಾರೆ.
ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿಗಳು, ರಾಜ್ಯದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದರು.
ಕನ್ನಡಿಗರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಶಾಲಿಗಳನ್ನಾಗಿ ಮಾಡುವ ಜತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ, ಕನ್ನಡ ಶಾಲೆಗಳ ಮೂಲಭೂತ ಸವಲತ್ತುಗಳನ್ನು ಹೆಚ್ಚಿಸಲು ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ದೇವರಾಜು ಅರಸು ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷಗಳು ತುಂಬಿವೆ. ಈ ದಿನ ನಾವು ಒಂದು ಪ್ರತಿಜ್ಞೆ ಮಾಡೋಣ. ಕನ್ನಡದಲ್ಲೇ ವ್ಯವಹರಿಸುವ ಪ್ರತಿಜ್ಞೆಯನ್ನು ನಾವು ಮಾಡುವ ಮೂಲಕ ನಮ್ಮ ತಾಯ್ನೆಲದ ಋಣ ತೀರಿಸುವ ಕೆಲಸ ಮಾಡೋಣ. ಇಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ಕನ್ನಡದ ವಾತಾವರಣವನ್ನು ಸೃಷ್ಟಿಸಬೇಕು, ಸಂಭ್ರಮಿಸಬೇಕು ಎಂದು ಕರೆ ನೀಡಿದರು.
ಕನ್ನಡ ನೆಲದಲ್ಲಿದ್ದೂ ಕನ್ನಡ ಮಾತನಾಡದವರು ಹಲವು ಭಾಗಗಳಲ್ಲಿ ಇದ್ದಾರೆ. ನಮ್ಮ ಆಡಳಿತ ಭಾಷೆ ಕನ್ನಡ. ಆದ್ದರಿಂದ ನಾವು ಕನ್ನಡದಲ್ಲೇ ವ್ಯವಹರಿಸಬೇಕು. ಪ್ರತಿಯೊಬ್ಬರ, ಪ್ರತಿಯೊಂದು ಭಾಷೆಗೂ ನಾವು ಗೌರವ ಕೊಡಬೇಕು. ಆದರೆ ನಮ್ಮ ನಾಡಿನಲ್ಲಿ ವ್ಯವಹರಿಸುವಾಗ, ಆಡಳಿತದಲ್ಲಿ ಕನ್ನಡ ಬಳಕೆ ಆಗಬೇಕು. ಇದನ್ನು ಪ್ರತಿಯೊಬ್ಬ ಅಧಿಕಾರಿಯೂ ಚಾಚೂ ತಪ್ಪದೆ ಪಾಲಿಸಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡದಲ್ಲೂ ಪ್ರವೇಶ ಪರೀಕ್ಷೆ ನಡೆಸಲು ಈ ಹಿಂದೆಯೂ ಒತ್ತಾಯಿಸಿದ್ದೆ. ಅಗತ್ಯಬಿದ್ದರೆ ಮತ್ತೆ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.
ಕನ್ನಡದಲ್ಲಿ ಕಲಿತರೆ ಉದ್ಯೋಗ ಸಿಗುವುದಿಲ್ಲ, ಜ್ಞಾನಸಂಪಾದನೆ ಸಾಧ್ಯವಿಲ್ಲ ಎನ್ನುವ ತಪ್ಪು ಕಲ್ಪನೆಯಿಂದ ಇಂಗ್ಲಿಷ್ ಕಾನ್ವೆಂಟ್ ವ್ಯಾಮೋಹ ಬೆಳೆಸಿಕೊಂಡಿದ್ದಾರೆ. ಇದು ಸರಿಯಲ್ಲ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡ ಮಾಧ್ಯಮದಲ್ಲಿ ಕಲಿತವರು ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಉನ್ನತ ಮಟ್ಟದ ಸಾಧನೆ ಮಾಡಿದ್ದಾರೆ ಎಂದು ಉದಾಹರಣೆ ನೀಡಿದರು.
ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಕಲಿಕಾ ವಾತಾವರಣ ಹಾಗೂ ಶಾಲೆಗಳ ಗುಣಮಟ್ಟ ಹೆಚ್ಚಿಸುವುದು. ಅಗತ್ಯ ಎಲ್ಲಾ ಸವಲತ್ತುಗಳನ್ನು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆ. ನಮ್ಮ ಆಡಳಿತ ಜನರಿಗೆ ತಲುಪಬೇಕಾದರೇ ಕನ್ನಡ ಭಾಷೆ ಬಹಳ ಮುಖ್ಯ. ಆಗ ಮಾತ್ರ ಅನೇಕರಿಗೆ ಈ ಸೇವೆ ಸಲ್ಲುತ್ತದೆ. ಬರೀ ಯೋಚನೆ ರೂಪಿಸಿದರೇ ಸಾಲದು, ಕಾರ್ಯಗತವಾಗಬೇಕು. ರಾಜಕಾರಣಿಗಳು, ಅಧಿಕಾರಿಗಳು ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಮಾಡಿಕೊಳ್ಳಬೇಕು.
ತಮ್ಮ ಮಕ್ಕಳನ್ನು ಅವರ ಇಷ್ಟದ ಭಾಷೆಯಲ್ಲಿ ಕಲಿಸುವುದು ಪೋಷಕರ ನಿರ್ಧಾರಕ್ಕೆ ಬಿಟ್ಟ ವಿಷಯ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ, ಮಾತೃಭಾಷೆಯ ಮಾಧ್ಯಮದಲ್ಲೇ ಕಲಿಯುವುದು ಅತ್ಯಂತ ವೈಜ್ಞಾನಿಕ ಎನ್ನುವುದನ್ನು ಗ್ರಹಿಸಬೇಕು.
ಕನ್ನಡ ನಮ್ಮ ಕಲಿಕೆ ಭಾಷೆ ಆಗಬೇಕು. ಇತ್ತೀಚೆಗೆ ಹೆಚ್ಚಿನ ಮಕ್ಕಳ ಖಾಸಗಿ ಶಾಲೆಗಳಲ್ಲಿ ವ್ಯಾಸಾಂಗ ಮಾಡಿಸುತ್ತಿರುವುದು ಅಪಾಯದ ಬೆಳವಣಿಗೆ. ಪೋಷಕರು ಖಾಸಗಿಯತ್ತ ಮುಖ ಮಾಡುತ್ತಿದ್ದಾರೆ. ಕನ್ನಡದಲ್ಲಿ ಓದಿದರೇ ಮೇದಾವಿಗಳಾಗುವುದಿಲ್ಲವೆಂಬುವುದು ಹಲವರಲ್ಲಿದೆ. ಕನ್ನಡ ಮಾಧ್ಯಮದಲ್ಲಿ ಓದಿದ ಅನೇಕ ವಿಜ್ಞಾನಿಗಳು ಜಗತ್ಪ್ರಸಿದ್ಧರಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲೇ ಓದಬೇಕೆನ್ನುವುದು ತಪ್ಪು ಕಲ್ಪನೆ. ಪೋಷಕರು ನಮಗೆ ಸಹಕಾರ ಕೊಡಬೇಕು. ನಮ್ಮ ಮಕ್ಕಳು ಯಾವ ಭಾಷೆಯಲ್ಲಿ ಕಲಿಯಬೇಕು ಅಂದು ಪೋಷಕರು ನಿರ್ಧರಿಸಬೇಕಿದೆ. ಕನ್ನಡ ಭಾಷೆಯಲ್ಲೇ ಕಲಿಯಬೇಕು ಅನ್ನೋ ತೀರ್ಮಾನ ಪೋಷಕರು ಮಾಡಬೇಕು ಎಂದು ಒತ್ತಾಯಿಸಿದರು.
ನಾಡಿನ ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ದುರದೃಷ್ಟವಶಾತ್ ರಾಜ್ಯದಲ್ಲಿ ಅನೇಕ ಜಾತಿ, ಧರ್ಮ ಇದೆ. ಇದರಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು, ಶಿಕ್ಷಣ ಇಲಾಖೆ ಕೆಲಸ ಮಾಡಬೇಕಿದೆ. ಕನಿಷ್ಠ ಎಸ್ಎಸ್ಎಲ್ಸಿವರೆಗಾದರೂ ಕನ್ನಡ ಮಾಧ್ಯಮದಲ್ಲಿ ಕಲಿಯಬೇಕು. ಸರ್ಕಾರಿ ಶಾಲೆಗಳಲ್ಲಿ ಉಚಿತ ವಿದ್ಯುತ್, ಕುಡಿಯುವ ನೀರು ಕೊಡುವಂತೆ ಒತ್ತಾಯ ಮಾಡಿದ್ದಾರೆ. ಎಲ್ಲ ಸರ್ಕಾರಿ ಶಾಲೆಗಳಲ್ಲೂ ಇಂದಿನಿಂದ ಉಚಿತವಾಗಿ ವಿದ್ಯುತ್ , ಕುಡಿಯುವ ನೀರು ನೀಡುತ್ತೇವೆ ಎಂದರು.
ನಮ್ಮ ಐದು ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಜಾರಿಗೊಳಿಸಿದ್ದೇವೆ. 86 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಅಡಿಯಲ್ಲಿ 1.28 ಲಕ್ಷ ಕುಟುಂಬಗಳಿಗೆ ಅಕ್ಕಿ ಬದಲಿಗೆ ತಲಾ 170 ರೂ. ನೀಡಲಾಗಿದೆ. ಗೃಹಜ್ಯೋತಿ ಅಡಿಯಲ್ಲಿ 1 ಕೋಟಿ 38 ಲಕ್ಷ ಮನೆಗಳಿಗೆ ಈ ಯೋಜನೆ ತಲುಪಿದೆ. ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ ಇಲ್ಲಿಯವರೆಗೆ 1.7 ಕೋಟಿ ಮಹಿಳೆಯರಿಗೆ ಹಣ ನೀಡಿದ್ದೇವೆ. ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಹಾಲು ವಿತರಣೆ ಮಾಡುತ್ತಿದ್ದೇವೆ. ಹಿಂದಿನ ನಮ್ಮ ಸರ್ಕಾರದಿಂದಲೂ ಈ ಯೋಜನೆ ಮುಂದುವರೆಸುತ್ತಾ ಬಂದಿದ್ದೇವೆ. ಮಕ್ಕಳು ಸ್ವಾಭಿಮಾನದಿಂದ ಬೆಳೆಯುವ ವಾತಾವರಣ ನಿರ್ಮಾಣ ಮಾಡೋಣ ಎಂದು ಹೇಳಿದರು.
ಕನ್ನಡಿಗರು ಹೆಮ್ಮೆಯಿಂದ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ಇಂದಿಗೆ 50 ವರ್ಷ ತುಂಬಿದೆ. ಸಂಪ್ರದಾಯಯವನ್ನು ರಾಜ್ಯದ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ. ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಘೋಷ ವಾಕ್ಯ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. 2024ರ ನವೆಂಬರ್ 1ರ ವರೆಗೂ ಈ ಉತ್ಸವ ನಡೆಯಲಿದೆ. ಕನ್ನಡ ಭಾಷೆಯಲ್ಲೇ ವ್ಯವಹರಿಸುತ್ತೇವೆ ಅಂತಾ ಪ್ರತಿಜ್ಞೆ ಮಾಡಬೇಕಿದೆ. ಬೇರೆ ಭಾಷೆಯಲ್ಲಿ ವ್ಯವಹರಿಸುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕಿದೆ. ಭಾಷೆ, ಜಲ, ಸಂಸ್ಕೃತಿ, ಕಲೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕಿದೆ. ಕನ್ನಡಿಗರು ಕನ್ನಡದಲ್ಲೇ ಮಾತನಾಡುವುದನ್ನು ಕಲಿಯಬೇಕು. ಬೇರೆ ಭಾಷೆ ಕಲಿಯಬೇಡಿ ಅಂತಲ್ಲ, ಕನ್ನಡ ಭಾಷೆಯನ್ನು ಮಾತನಾಡಿ ಎಂದು ಹೇಳಿದರು.
ಬಳಿಕ ಮಾತನಾಡಿ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಕನ್ನಡ ರಾಜ್ಯೋತ್ಸವದ 50 ರ ಸಂಭ್ರಮವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಎಂದು ಘೋಷಣೆ ಮಾಡಲಾಗಿದೆ. ನಮ್ಮ ಇಲಾಖೆಯಿಂದ 13,000 ಶಿಕ್ಷಕರ ನೇಮಕ ಮಾಡಲಾಗಿದೆ. ಇನ್ನು ಅಗತ್ಯ ಇರುವ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.
ಶಾಲೆಯ ಮಕ್ಕಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ 8,0311 ಹೊಸ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ರಾಜ್ಯದಲ್ಲಿ 2000 ಶಾಲೆಗಳ ನಿರ್ಮಾಣಕ್ಕೆ ಗುರಿ ಹೊಂದಲಾಗಿದೆ. 600 ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಎಸ್ಎಸ್ಎಲ್’ಸಿ ಮತ್ತು ಪಿಯುಸಿ ಮಕ್ಕಳ ಸಾಮರ್ಥ್ಯ ಹೆಚ್ಚಿಸಲು ಮುಖ್ಯ ಪರೀಕ್ಷಕರ ಮುಂದೆ ಮೂರು ಬಾರಿ ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತಿದೆ. ಗುಣಮಟ್ಟದ ಶಿಕ್ಷಣವೇ ಸರ್ಕಾರದ ಧ್ಯೇಯವಾಗಿದೆ. ಸಸ್ಯ ಶ್ಯಾಮಲಾ ಕಾರ್ಯಕ್ರಮದ ಮೂಲಕ 50 ಸಾವಿರ ಸಸಿಗಳನ್ನು ನೆಡಲಾಗುವುದು. ಮಕ್ಕಳ ಬ್ಯಾಗ್ ಹೊರೆಯನ್ನು ಶೇ 50 ರಷ್ಟು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಾತನಾಡಿ, ಕನ್ನಡ ಭಾಷೆಯ ಮೇಲಿನ ಅಭಿಮಾನ ಕೇವಲ ನವೆಂಬರ್ 1 ಕ್ಕೆ ಮಾತ್ರ ಸೀಮಿತವಾಗದಿರಲಿ ಎಂದು ಹೇಳಿದರು. ಕನ್ನಡ ಹೃದಯ ಭಾಷೆಯಾಗಲಿ ಹಾಗೂ ಮನಸ್ಸಿನ ಭಾಷೆಯಾಗಲಿ ಎಂದು ಕರೆ ನೀಡಿದರು.
ಕರ್ನಾಟಕ ಮತ್ತು ಕನ್ನಡ ಭೂಮಿ ನಮಗೆ ಸ್ವರ್ಗ. ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದ ಲಕ್ಷಾಂತರ ಜನರನ್ನು ನೆನೆಯಬೇಕು. ಕನ್ನಡವನ್ನು ಮರೆತರೆ ತಾಯಿಯನ್ನು ಮರೆತಂತೆ ಎಂದು ಹೇಳಿದರು.