ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...
ಹುಲಿ ಉಗುರು ಧರಿಸಿದ ಪ್ರಕರಣ: ನಟ ದರ್ಶನ್, ವಿನಯ್ ಗುರೂಜಿ ವಿರುದ್ಧ ಅರಣ್ಯ ಇಲಾಖೆಯಿಂದ ತನಿಖೆ
ಬೆಂಗಳೂರು: ಹುಲಿ ಉಗುರು ಧರಿಸಿದ ಆರೋಪದ ಮೇಲೆ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಅವರನ್ನು ಬಂಧಿಸಿದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಂತಹದ್ದೇ ಪೆಂಡೆಂಟ್ ಧರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ಹಲವರು ಒತ್ತಾಯಿಸಿದ್ದಾರೆ ಮತ್ತು ಈ ಸಂಬಂಧ ನಟ ದರ್ಶನ್ ಹಾಗೂ ವಿನಯ್ ಗುರೂಜಿ ವಿರುದ್ಧ ದೂರು ಸಹ ದಾಖಲಾಗಿದೆ.
ನಟ ದರ್ಶನ್ ಹಾಗೂ ವಿನಯ್ ಗುರೂಜಿ ವಿರುದ್ಧ ತನಿಖೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದು, ತನಿಖೆಗಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಈಗಾಗಲೇ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ಧರ್ಮಗುರು ವಿನಯ್ ಗುರೂಜಿ ವಿರುದ್ಧ ಹುಲಿ ಚರ್ಮದ ಮೇಲೆ ಕುಳಿತ ಆರೋಪ ಕೇಳಿಬಂದಿದ್ದು, ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.
ಈ ಕುರಿತು ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, “ಇಬ್ಬರ ವಿರುದ್ಧ ನಮಗೆ ಯಾವುದೇ ದೂರು ಬಂದಿಲ್ಲವಾದರೂ, ಅವರು ವನ್ಯಜೀವಿ ದೇಹದ ಭಾಗಗಳನ್ನು ಹೊಂದಿದ್ದಾರೆ ಎಂಬ ಮಾಹಿತಿ ಇದೆ. ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ತಮ್ಮಲ್ಲಿರುವ ಮಾಹಿತಿಯ ಆಧಾರದ ಮೇಲೆ ತನಿಖೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಮುಖ್ಯ ವನ್ಯಜೀವಿ ವಾರ್ಡನ್‌ನಿಂದ ಪೂರ್ವಾನುಮತಿ ಪಡೆಯದೆ ಹುಲಿ ಚರ್ಮ ಅಥವಾ ಉಗುರು ಹೊಂದಿರುವುದು ಕಂಡುಬಂದರೆ, ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ಲಾಸ್ಟಿಕ್‌ನಿಂದ ತಯಾರಿಸಿದ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ನಟ ‘ಹುಲಿ ಉಗುರಿನ’ ಪೆಂಡೆಂಟ್ ಧರಿಸಿದ್ದಾರೋ ಇಲ್ಲವೋ ಎಂಬುದನ್ನು ಅಧಿಕಾರಿಗಳು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
“ಸಂತೋಷ್ ಕುಮಾರ್ ಪ್ರಕರಣದಲ್ಲಿ ನಾವು ಹೇಗೆ ಮಾಡಿದ್ದೇವೆಯೋ ಹಾಗೆಯೇ ಅವರಲ್ಲಿನ ಪೆಂಡೆಂಟ್ ಅನ್ನು ವಿಧಿವಿಜ್ಞಾನ ಪರೀಕ್ಷೆಯ ಮೂಲಕ ಪರಿಶೀಲಿಸಬೇಕು ಮತ್ತು ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಅಧಿಕಾರಿ ಹೇಳಿದ್ದಾರೆ.
ಸಂತೋಷ್ ಕುಮಾರ್ ಪ್ರಕರಣದ ಕುರಿತು ತನಿಖೆ ಮುಗಿದ ನಂತರ ಮುಂದಿನ ಕ್ರಮಕ್ಕಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.