Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ತಾಯಿ ಚಾಮುಂಡಿ ದೇವಿ ಅನುಗ್ರಹದಿಂದ ಇನ್ನಾದರೂ ರಾಜ್ಯದಲ್ಲಿ ಮಳೆಯಾಗಲಿ: ನಂದಿಧ್ವಜ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಐತಿಹಾಸಿಕ ಮೈಸೂರು ದಸರಾದ (Mysuru dasara 2023) ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕೆ ಮುನ್ನ ಮೈಸೂರು ಅರಮನೆ ಬಲರಾಮ ಗೇಟ್​ ಬಳಿ ಸಿಎಂ ಸಿದ್ದರಾಮಯ್ಯ ನಂದಿಧ್ವಜ ಪೂಜೆ ನೆರವೇರಿಸಿದರು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್​, ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ, ಸಚಿವರಾದ ಕೆ.ಹೆಚ್​.ಮುನಿಯಪ್ಪ, ವೆಂಕಟೇಶ್​, ಶಿವರಾಜ್​ ತಂಗಡಗಿ, ಕೆ.ಎನ್​.ರಾಜಣ್ಣ, ಭೈರತಿ ಸುರೇಶ್​ ಹಾಗೂ ಸಂಸದ ಪ್ರತಾಪ್​ ಸಿಂಹ ಸಾಥ್ ನೀಡಿದರು.

ಜಂಬೂ ಸವಾರಿಯಲ್ಲಿ ನಂದಿಗೆ ಅಗ್ರ ಪೂಜೆ ಸಲ್ಲಿಕೆಯಾಗುತ್ತದೆ. ಅದರಂತೆ ಇಂದು ಮಧ್ಯಾಹ್ನ 1.46ರಿಂದ 2.08ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ನೆರವೇರಿಸಿದರು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ ಎದುರು ಇರುವ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ ಅವರು, ಜಂಬೂ ಸವಾರಿಗೆ ಅಧಿಕೃತ ಚಾಲನೆಯನ್ನು ನೀಡಿದರು. ಈ ವೇಳೆ ವೀರಗಾಸೆ ತಂಡದವರು ಭಾಗಿಯಾಗಿದ್ದರು. ದಶಕಗಳಿಂದ ಉಡಿಗಾಲ ಮಹದೇವಸ್ವಾಮಿ ನೇತೃತ್ವದ ಈ ತಂಡ ಭಾಗಿಯಾಗುತ್ತಲೇ ಬಂದಿದ್ದು, ದಸರೆಗೆ ಕಳೆಕಟ್ಟಿಕೊಟ್ಟಿದೆ.

ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ವರ್ಷ ಮಳೆಯಿಲ್ಲದೆ ರಾಜ್ಯದ ಜನತೆ ಕಂಗಾಲಾಗಿದ್ದಾರೆ. ಬರಗಾಲ ತಾಂಡವವಾಡುತ್ತಿದೆ. ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಇನ್ನಾದರೂ ತಾಯಿ ಚಾಮುಂಡಿ ದೇವಿಯ ಅನುಗ್ರಹದಿಂದ ಮಳೆಯಾಗಲಿ ಎಂದು ನಾನು ಇಂದು ವಿಜಯ ದಶಮಿಯ ಶುಭ ಸಂದರ್ಭದಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.

ಮೈಸೂರು ದಸರಾ ವಿಶ್ವವಿಖ್ಯಾತ ಉತ್ಸವ. ದಸರಾ ಎಂದರೆ ನಮಗೆ ನಾಡಹಬ್ಬ. ಜನರ ಹಬ್ಬವಿದು, ಈ ಹಬ್ಬವನ್ನು ಬಹಳ ಅದ್ದೂರಿಯಾಗಿ ಈ ಬಾರಿ ಆಚರಿಸಬೇಕೆಂದು ನಮ್ಮ ಸರ್ಕಾರ ಅಂದುಕೊಂಡಿತ್ತು. ಆದರೆ ರಾಜ್ಯದಲ್ಲಿ ಬರದ ಛಾಯೆಯಿಂದ ಅದ್ದೂರಿಯಾಗಿ ಆಚರಿಸದೆ ಸಂಪ್ರದಾಯಬದ್ಧವಾಗಿ ಆಚರಿಸಿದ್ದೇವೆ ಎಂದರು.

ದಸರಾ ನೋಡಲು ದೇಶ ವಿದೇಶಗಳಿಂದ ಜನರು ಬಂದಿದ್ದಾರೆ. ಈ ವರ್ಷ 10 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಜನರು ಉತ್ಸಾಹ, ಸಂಭ್ರಮದಿಂದ ಭಾಗವಹಿಸುತ್ತಿದ್ದಾರೆ. ವಿಜಯನಗರ ಅರಸರು ಆಚರಿಸುತ್ತಿದ್ದ ಈ ದಸರಾ ಉತ್ಸವವನ್ನು ಅವರು ಗತಿಸಿದ ನಂತರ ಮೈಸೂರು ಅರಸರು ಶ್ರೀರಂಗಪಟ್ಟಣದಲ್ಲಿ ಆಚರಣೆ ಆರಂಭಿಸಿದರು. ನಂತರ ಮೈಸೂರು ರಾಜಧಾನಿಗೆ ದಸರಾ ಆಚರಣೆ ವರ್ಗಾವಣೆಗೊಂಡಿತು. ರಾಜರ ಆಳ್ವಿಕೆ ಕಾಲದಲ್ಲಿ ರಾಜ ಮಹಾರಾಜರು ಅಂಬಾರಿಯಲ್ಲಿ ಮೆರವಣಿಗೆ ಸಾಗುತ್ತಿದ್ದರು.

ಈಗ ಪ್ರಜಾಪ್ರಭುತ್ವ ಸರ್ಕಾರ ಬಂದ ಮೇಲೆ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ವಿಗ್ರಹವನ್ನು ಕೂರಿಸಿ ಅದಕ್ಕೆ ಪುಷ್ಪಾರ್ಚನೆ ಮಾಡಿ ಮೆರವಣಿಗೆ ಮಾಡುವ ಸಂಪ್ರದಾಯ ಆರಂಭವಾಯಿತು. ವಿಜಯದಶಮಿ ದಿನ ಜಂಬೂಸವಾರಿಯಲ್ಲಿ ಎಲ್ಲಾ ಜಿಲ್ಲೆಗಳಿಂದ ಸ್ತಬ್ಧಚಿತ್ರಗಳು ಬರುತ್ತವೆ. ಈ ವರ್ಷದ ವಿಶೇಷ ಸರ್ಕಾರದ ಗ್ಯಾರಂಟಿ ಯೋಜನೆಗಳ ಸ್ತಬ್ಧಚಿತ್ರಗಳ ಪ್ರದರ್ಶನವಿದೆ ಎಂದರು.

ದಸರಾ ನಾಡಹಬ್ಬವಾಗಿರುವುದರಿಂದ ಜನರ ಹಬ್ಬವಾಗಿ ಆಚರಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತದೆ. ಇವತ್ತು ಪಂಜಿನ ಕವಾಯತು ಪ್ರದರ್ಶನ ಇದೆ, ಜನರು ಖುಷಿಯಿಂದ ಭಾಗವಹಿಸುತ್ತಿದ್ದಾರೆ. ಮಹಿಳೆಯರು ಈ ಬಾರಿ ದಸರಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ ಎಂದರು. ದಸರಾ ಪ್ರಾಧಿಕಾರ ರಚನೆ ಬಗ್ಗೆ ಯೋಚನೆ ಮಾಡಿಲ್ಲ.

ರಾಮನಗರವನ್ನು ಬೆಂಗಳೂರು ನಗರಕ್ಕೆ ಸೇರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆಯೇ ಎಂದು ಸುದ್ದಿಗಾರರು ಕೇಳಿದಾಗ ಇಂದು ದಸರಾ ಹಬ್ಬದ ಬಗ್ಗೆ ಕೇಳಿ ಎಂದರೆ ಇದೆಲ್ಲ ಮಾತನಾಡುತ್ತೀರ ಎಂದು ಸಿಎಂ ಗರಂ ಆದರು.

ಇಂದು ಮಧ್ಯಾಹ್ನ 1.46ರಿಂದ 2.48ರ ಶುಭ ಮಕರ ಲಗ್ನದಲ್ಲಿ ನಂದಿಧ್ವಜ ಪೂಜೆ ನೆರವೇರಿದೆ. ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ನಂತರ ಬಂಜೂಸವಾರಿಗೆ ಚಾಲನೆ ನೀಡಲಾಗುತ್ತದೆ. ನಂತರ ನಂದಿಧ್ವಜ, ಸ್ತಬ್ದಚಿತ್ರ, ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ.ಮೈಸೂರು ಅರಮನೆಯಿಂದ ಹೊಡಲಿರುವ ಜಂಬೂ ಸವಾರಿ ಕೆ.ಆರ್.ಸರ್ಕಲ್ , ಆರ್ಯವೇದ ಸರ್ಕಲ್‌, ತಿಲಕ್ ನಗರ ಬಂಬೂ ಬಜಾರ್ ಮೂಲಕ ಬನ್ನಿ ಮಂಟಪ್ಪಕ್ಕೆ ತಲುಪಲಿದೆ. ಸುಮಾರು 4 ರಿಂದ 5 ಕಿ ಮೀ ಜಂಬೂ ಸವಾರಿ ನಡೆಯಲಿದೆ.

ಜಂಬೂಸವಾರಿ ಮೆರವಣಿಗೆಯಲ್ಲಿ 49 ಟ್ಯಾಬ್ಲೋಗಳು ಭಾಗಿ: ಈ‌ ಬಾರಿ ಜಂಬೂಸವಾರಿ ಮೆರವಣಿಗೆಯಲ್ಲಿ 49 ಟ್ಯಾಬ್ಲೋಗಳು ಭಾಗಿಯಾಗಲಿವೆ. ರಾಜ್ಯಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಕುರಿತ ಸ್ತಬ್ಧ ಚಿತ್ರಗಳು ಸಹ ಇರುತ್ತವೆ. ಈ ಬಾರಿ ದಸರಾ ಮೆರವಣಿಗೆಯಲ್ಲಿ ಗಂಡುಕಲೆ ಎಂತಲೇ ಖ್ಯಾತಿ ಪಡೆದಿರುವ ಆಕರ್ಷಕ ನಂದಿಧ್ವಜ ಕುಣಿತದಲ್ಲಿ ಇದೇ ಮೊದಲ ಬಾರಿಗೆ 108 ನಂದಿಧ್ವಜ ಕುಣಿತ ಮಾಡಲಿದೆ.

No Comments

Leave A Comment