ಬೆಳಗ್ಗೆ ತಾಲೀಮು ನಡೆಸಿ ಸಂಜೆ ಹೆಣ್ಣುಮರಿಗೆ ಜನ್ಮ ನೀಡಿದ ಜಂಬೂ ಸವಾರಿಗೆ ಬಂದಿದ್ದ ನೇತ್ರಾವತಿ ಆನೆ
ಶಿವಮೊಗ್ಗ : ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ತಾಲೀಮು ನಡೆಸಿದ್ದ 28 ವರ್ಷದ ನೇತ್ರಾವತಿ ಆನೆಯು ಹೆಣ್ಣು ಮರಿಗೆ ಜನ್ಮ ನೀಡಿದೆ.
ಕೆಲವು ವರ್ಷಗಳಿಂದ ಶಿವಮೊಗ್ಗ ದಸರಾದಲ್ಲಿ ಬೆಳ್ಳಿ ಅಂಬಾರಿ ಹೊರಲು ಮೂರು ಆನೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬಾರಿಯು ಅಂಬಾರಿ ಹೊರುವ ಸಾಗರನ ಜತೆ ಯಾವ ಅನೆಗಳನ್ನು ಕಳುಹಿಸಬೇಕು ಎಂದು ಗೊಂದಲ ಮೂಡಿತ್ತು. ಕುಂತಿ ಈಚೆಗೆ ಮರಿ ಹಾಕಿತ್ತು. ಭಾನುಮತಿ ತುಂಬು ಗರ್ಭಿಣಿಯಾಗಿತ್ತು. ಹಾಗಾಗಿ ಸಾಗರ ಆನೆ ಜತೆ ನೇತ್ರಾವತಿ, ಹೇಮಾವತಿ ಆನೆಗಳನ್ನು ಕಳುಹಿಸಲಾಗಿತ್ತು.
ಪ್ರತಿ ವರ್ಷದಂತೆ ಈ ವರ್ಷವು ಶಿವಮೊಗ್ಗದಲ್ಲಿ ಅದ್ಧೂರಿಯಾಗಿ ದಸರಾ ಆಚರಣೆ ನೆರವೇರುತ್ತದೆ. ಶಿವಮೊಗ್ಗ ಪಾಲಿಕೆ ಮೇಯರ್ ಮನವಿ ಬೆನ್ನಲ್ಲೆ ಸಕ್ರೈಬೈಲು ಬಿಡಾರದಿಂದ 3 ಪಳಗಿದ ಆನೆಗಳನ್ನು ಇಲ್ಲಿನ ದಸರಾ ಕಳುಹಿಸಲು ಅರಣ್ಯ ಸಚಿವರಿಂದ ಗ್ರೀನ್ ಸಿಗ್ನಲ್ ದೊರೆತಿತ್ತು. ಅದರಂತೆ ಸಾಗರ್ (ಗಂಡಾನೆ), ಹೇಮಾವತಿ ಮತ್ತು ನೇತ್ರಾವತಿ ಆನೆಗಳು ಹಬ್ಬಕ್ಕೂ ಮೊದಲೇ ಮಲೆನಾಡಿನ ಜಿಲ್ಲೆಗೆ ಬಂದು ಇಲ್ಲಿನ ವಾಸವಿ ಶಾಲಾ ಆವರಣದಲ್ಲಿ ನೆಲೆಸಿದ್ದವು. ಅಗತ್ಯ ತಾಲೀಮು ಸಹ ನಡೆಸಲಾಗಿತ್ತು.
ಮೂರು ದಿನದ ಹಿಂದೆ ಶಿವಮೊಗ್ಗ ನಗರಕ್ಕೆ ಕರೆತಂದು ಮೆರವಣಿಗೆ ಮಾರ್ಗದಲ್ಲಿ ಬೆಳಗ್ಗೆ ಸಂಜೆ ತಾಲೀಮು ನಡೆಸಲಾಗುತಿತ್ತು. ನಿನ್ನೆ ಸಂಜೆ ಕೂಡ ತಾಲೀಮು ಮುಗಿಸಿ ವಾಸವಿ ಶಾಲೆ ಆವರಣದಲ್ಲಿ ಬೀಡು ಬಿಟ್ಟಿದ್ದವು. ರಾತ್ರಿ 10 ಗಂಟೆ ಸುಮಾರಿಗೆ ನೇತ್ರಾವತಿ ಮರಿಗೆ ಜನ್ಮ ನೀಡಿದ್ದಾಳೆ.