ಹಾವೇರಿ: ಮುಕ್ಕೋಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್’ ಎಂದು ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸುಕ್ಷೇತ್ರ ದೇವರಗುಡ್ಡದ ಮಾಲತೇಶ ದೇವರ ಕಾರ್ಣಿಕ ನುಡಿದಿದೆ.
ನಾಗಪ್ಪಜ್ಜ ಉರ್ಮಿ ಗೊರವಯ್ಯಾ ನುಡಿದ ಕಾರ್ಣಿಕವನ್ನು ಬಳಿಕ ದೇಗುಲದ ಪ್ರಧಾನ ಅರ್ಚಕ ಸಂತೋಷ ಭಟ್ ವಿಶ್ಲೇಷಿಸಿದ್ದು, ಮುಕ್ಕೋಟಿ ಚಲ್ಲಿತಲೇ ಅಂದರೆ ರೈತರು ಕೋಟ್ಯಂತರ ರೂ. ಭೂಮಿಗೆ ಹಾಕುತ್ತಾರೆ. ರೈತರಿಗೆ ಲಾಭವಾಗುವ ನಿರೀಕ್ಷೆಗಳು ಕಡಿಮೆ. ಮಕ್ಕೋಟಿ ರೈತರು ನೀರಿಗಾಗಿ ಹಣ ಚಲ್ಲಿದ್ದಾರೆ. ಮಳೆ ಬೆಳೆಯಿಲ್ಲದೆ ನಷ್ಟವಾಗುವ ಸಾಧ್ಯತೆ ಇದೆ. ರಾಜ್ಯಕ್ಕೆ ವರುಣನ ಅವಕೃಪೆಯಿಂದಾಗಿ ಭೀಕರ ಬರಗಾಲ ಎದುರಾಗಬಹುದು ಎಂದು ವಿವರಿಸಿದ್ದಾರೆ.
ಕಲ್ಯಾಣಿ ಕಕ್ಕಿತಲೆ ಅಂದರೆ ರಾಜ್ಯ ಸರ್ಕಾರಕ್ಕೆ ಆಪತ್ತು ಬರುವ ಸಾಧ್ಯತೆ. ಒಂದು ಹೆಣ್ಣಿನ ಹಸ್ತಕ್ಷೇಪದಿಂದ ರಾಜ್ಯ ರಾಜಕೀಯ ಏರುಪೇರಾಗುವ ಸಾಧ್ಯತೆ ಎಂದು ಕಾರ್ಣಿಕ ವಿಶ್ಲೇಷಿಸಿದ್ದಾರೆ.
ಪ್ರತಿ ವರ್ಷ ದಸರಾ ಹಬ್ಬದ ಆಯುಧ ಪೂಜೆಯಂದು ಕಾರ್ಣಿಕ ನುಡಿಯಲಾಗುತ್ತದೆ. ಒಂಬತ್ತು ದಿನ ಉಪವಾಸವಿದ್ದು ಗೊರವಯ್ಯಾ ಕಾರ್ಣಿಕ ನುಡಿಯುತ್ತಾರೆ. ಬಿಲ್ಲನ್ನೇರಿ ಪ್ರಸಕ್ತ ವರ್ಷದ ಕಾರ್ಣಿಕವನ್ನು ಗೊರವಪ್ಪ ನುಡಿದಿದ್ದಾರೆ. ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿ ಆಗಿದ್ದರು.
ಆಯುಧ ಪೂಜೆಯ ದಿನ ಡೆಂಕಣಮರಡಿಯಲ್ಲಿ ಕಾರ್ಣಿಕ ನುಡಿ ಆಲಿಸಲು ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತರು ನೆರೆದಿದ್ದರು. ಕಾರ್ಣಿಕೋತ್ಸವ ಕೇಳಲು ರಾಜ್ಯದ ವಿವಿಧೆಡೆಯಿಂದ ಭಕ್ತಸಾಗರವೇ ಹರಿದು ಬರುತ್ತದೆ. ಮಾಲತೇಶ ಸ್ವಾಮಿಯೇ ಗೊರವಯ್ಯನಿಂದ ವರ್ಷದ ಭವಿಷ್ಯ ತಿಳಿಸುತ್ತಾನೆಂದು ಉತ್ತರ ಕರ್ನಾಟಕದ ಸಾವಿರಾರು ಭಕ್ತರು ನಂಬುತ್ತಾರೆ.