ಆಪರೇಷನ್ ಅಜಯ್; ಇಸ್ರೇಲ್‌ನಿಂದ ದೆಹಲಿಗೆ ಬಂದಿಳಿದ ಇಬ್ಬರು ನೇಪಾಳೀಯರು ಸೇರಿ 143 ಭಾರತೀಯರು!
ನವದೆಹಲಿ: ‘ಆಪರೇಷನ್ ಅಜಯ್’ ಕಾರ್ಯಾಚರಣೆ ಭಾಗವಾಗಿ ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ಇಸ್ರೇಲ್ ತೊರೆಯಲು ಬಯಸಿದ್ದ ಇಬ್ಬರು ನೇಪಾಳದ ನಾಗರಿಕರು ಮತ್ತು ನಾಲ್ಕು ಶಿಶುಗಳು ಸೇರಿದಂತೆ 143 ಮಂದಿ ಭಾರತೀಯರನ್ನು ಹೊತ್ತ ವಿಶೇಷ ವಿಮಾನವು ಭಾನುವಾರ ದೆಹಲಿಗೆ ಬಂದಿಳಿದಿದೆ.
ಗಾಜಾದಿಂದ ಇಸ್ರೇಲ್ ಪಟ್ಟಣಗಳ ಮೇಲೆ ಹಮಾಸ್ ಬಂಡುಕೋರರು ನಡೆಸಿದ ದಾಳಿಯ ನಂತರ ಸ್ವದೇಶಕ್ಕೆ ಮರಳಲು ಬಯಸುವ ಭಾರತೀಯರಿಗೆ ಅಕ್ಟೋಬರ್ 12ರಂದು ಪ್ರಾರಂಭಿಸಲಾದ ಆಪರೇಷನ್ ಅಜಯ್‌ನ ಭಾಗವಾಗಿ ಇದು ಆರನೇ ವಿಮಾನ ಭಾರತಕ್ಕೆ ಯಶಸ್ವಿಯಾಗಿ ಬಂದಿದೆ.
ಈ ವಿಮಾನದಲ್ಲಿ ಇಬ್ಬರು ನೇಪಾಳದ ನಾಗರಿಕರು ಮತ್ತು ನಾಲ್ಕು ಶಿಶುಗಳು ಸೇರಿದಂತೆ 143 ಮಂದಿ ಭಾರತಕ್ಕೆ ಬಂದಿದ್ದಾರೆ ಎಂದು ಬಲ್ಲ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.
‘ಆಪರೇಷನ್ ಅಜಯ್ ಮುಂದುವರಿಯುತ್ತದೆ. ಆರನೇ ವಿಮಾನವು ಟೆಲ್ ಅವೀವ್‌ನಿಂದ ದೆಹಲಿಗೆ ಹೊರಟಿದೆ. ರಾಯಭಾರ ಕಚೇರಿಯು ಎಲ್ಲರಿಗೂ ಸುರಕ್ಷಿತ ಪ್ರಯಾಣವನ್ನು ಬಯಸುತ್ತದೆ’ ಎಂದು ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ಟ್ವೀಟ್ ಮಾಡಿದೆ.
ಕಳೆದ ಮಂಗಳವಾರ ಇಸ್ರೇಲ್‌ನಿಂದ ಬಂದಿದ್ದ ವಿಶೇಷ ವಿಮಾನದಲ್ಲಿ ಹದಿನೆಂಟು ನೇಪಾಳ ಪ್ರಜೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು.
ಅಕ್ಟೋಬರ್ 7ರಂದು ಗಾಜಾ ಪಟ್ಟಿಯಲ್ಲಿರುವ ಶಸ್ತ್ರಸಜ್ಜಿತ ಹಮಾಸ್ ಬಂಡುಕೋರರು ಭೂ, ವಾಯು ಮತ್ತು ಸಮುದ್ರದ ಮೂಲಕ ಇಸ್ರೇಲ್ ಮೇಲೆ ಏಕಕಾಲದಲ್ಲಿ ಹಠಾತ್ ದಾಳಿ ನಡೆಸಿದರು. ಅಂದಿನಿಂದ ದಾಳಿಗೆ ಪ್ರತಿಯಾಗಿ ಇಸ್ರೇಲ್ ಕೂಡ ಹಮಾಸ್ ನಿಯಂತ್ರಿತ ಗಾಜಾ ಪಟ್ಟಿಯ ಮೇಲೆ ಭಾರಿ ಬಾಂಬ್ ದಾಳಿ ನಡೆಸುತ್ತಿದೆ.
ಹೀಗಾಗಿ, ಇಸ್ರೇಲ್‌ನಲ್ಲಿ ಸಿಲುಕಿ, ಅಲ್ಲಿಂದ ವಾಪಸಾಗಲು ಬಯಸುವ ಭಾರತೀಯರಿಗೆ ಮರಳಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ಪ್ರಾರಂಭಿಸಿದ ‘ಆಪರೇಷನ್ ಅಜಯ್’ ಅಡಿಯಲ್ಲಿ ಒಟ್ಟು ನಾಲ್ಕು ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
ಇಲ್ಲಿಯವರೆಗೆ, ಟೆಲ್ ಅವೀವ್‌ನಿಂದ ಐದು ವಿಶೇಷ ವಿಮಾನಗಳು ಮಕ್ಕಳು ಸೇರಿದಂತೆ ಸುಮಾರು 1,200 ಪ್ರಯಾಣಿಕರೊಂದಿಗೆ ದೆಹಲಿಗೆ ಬಂದಿಳಿದಿವೆ.
ಯುದ್ಧ ಪ್ರಾರಂಭವಾದಾಗಿನಿಂದ, ಸುಮಾರು 4,400 ಪ್ಯಾಲೆಸ್ಟೀನಿಯನ್ನರು ಸಾವಿಗೀಡಾಗಿದ್ದು, ಅಧಿಕೃತ ಇಸ್ರೇಲಿ ಮೂಲಗಳ ಪ್ರಕಾರ, ಇಸ್ರೇಲಿನಲ್ಲಿ ಕನಿಷ್ಠ 1,400 ಇಸ್ರೇಲಿಗಳು ಮತ್ತು ವಿದೇಶಿ ಪ್ರಜೆಗಳು ಸಾವಿಗೀಡಾಗಿದ್ದಾರೆ.