ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಬಹುಮಹಡಿ ಕಟ್ಟಡದ ಪಬ್ ನಲ್ಲಿ ಬೆಂಕಿ, ಇಬ್ಬರಿಗೆ ಗಂಭೀರ ಗಾಯ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಬುಧವಾರ ಅಗ್ನಿದುರಂತ ಸಂಭವಿಸಿದೆ. ಕೋರಮಂಗಲ ಸಮೀಪದ ತಾವರಕೆರೆ ಮುಖ್ಯರಸ್ತೆಯಲ್ಲಿರುವ ಪಬ್ ವೊಂದರಲ್ಲಿ ಸಿಲಿಂಡರ್ ಸ್ಟೋಟದಿಂದ ಅಗ್ನಿ ದುರಂತ ಸಂಭವಿಸಿದ್ದು, ಕಟ್ಟಡದ ನಾಲ್ಕನೇ ಮಹಡಿ ಸಂಪೂರ್ಣ ಹೊತ್ತಿ ಉರಿದಿದೆ.
ಬೆಂಕಿಯಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬರು ಟೆರೇಸ್‌ನಿಂದ ಜಿಗಿದಿದ್ದಾರೆ. ಅವರು ಮತ್ತು ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಲ್ಕು ಅಂತಸ್ತಿನ ಕಟ್ಟಡದ ಮೇಲಿನ ಮಹಡಿಯಲ್ಲಿ ಹಲವಾರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಂಗ್ರಹಿಸಲಾಗಿದ್ದ ‘ಹುಕ್ಕಾ ಬಾರ್ ಮತ್ತು ಕೆಫೆ’ಯಲ್ಲಿ ಮಧ್ಯಾಹ್ನದ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.
ಸುತ್ತಮುತ್ತಲಿನ ಜನರು ಸ್ಫೋಟದಂತಹ ಶಬ್ದಗಳನ್ನು ಕೇಳಿದರು. ನಾವು ಎಂಟು ಅಗ್ನಿಶಾಮಕ ಟೆಂಡರ್ಗಳನ್ನು ಸ್ಥಳಕ್ಕೆ ಕಳುಹಿಸಿದ್ದೇವೆ ಮತ್ತು ನಮ್ಮ ಹಿರಿಯ ಅಧಿಕಾರಿಗಳು ಘಟನಾ ಸ್ಥಳದಲ್ಲಿದ್ದಾರೆ. ಬೆಂಕಿಯನ್ನು ನಂದಿಸಲಾಗಿದೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.