ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...
ಬಿಜೆಪಿಯ ಶೇ 75ರಷ್ಟು ಜನರಿಗೆ ಜೆಡಿಎಸ್ ಜೊತೆಗಿನ ಮೈತ್ರಿ ಇಷ್ಟವಿಲ್ಲ, ನಾನಿನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಡಿವಿ ಸದಾನಂದ ಗೌಡ
ಬೆಂಗಳೂರು: ಮುಂಬರುವ 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮೈತ್ರಿಗೆ ಎರಡೂ ಪಕ್ಷಗಳ ಒಳಗೂ ಅಸಮಾಧಾನ ಕೇಳಿಬರುತ್ತಿದೆ. ಈಗಾಗಲೇ ಜೆಡಿಎಸ್ ನಾಯಕರು ಬಹಿರಂಗವಾಗಿಯೇ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದು, ಕೆಲ ಬಿಜೆಪಿ ನಾಯಕರು ಕೂಡ ಮೈತ್ರಿಗೆ ಅಪಸ್ವರ ಎತ್ತಿದ್ದಾರೆ. ಶಾಸಕ ಎಸ್‍ಟಿ ಸೋಮಶೇಖರ್ ಕೂಡ ಬಹಿರಂಗವಾಗಿ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇದೀಗ ಈ ಸಾಲಿಗೆ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿವಿ ಸದಾನಂದ ಗೌಡ ಸೇರಿದ್ದು, ಪಕ್ಷದ ರಾಜ್ಯ ನಾಯಕರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಬಿಜೆಪಿಯಲ್ಲಿನ ಶೇ 75ರಷ್ಟು ಜನರಿಗೆ ಈ ಮೈತ್ರಿ ಇಷ್ಟವಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಪತ್ರಿಕೆಯೊಂದರ ಜೊತೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಎನ್‌ಡಿಎ ಮೈತ್ರಿಕೂಟವನ್ನು ಬಲಪಡಿಸಬೇಕು ನಿಜ. ಆದರೆ, ರಾಜ್ಯ ಬಿಜೆಪಿ ನಾಯಕರ ಜೊತೆ ಚರ್ಚಿಸದೆ, ಏಕಪಕ್ಷೀಯವಾಗಿ ಮೈತ್ರಿ ಮಾಡಿಕೊಂಡರೆ, ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದಿದ್ದಾರೆ.
ಇತ್ತೀಚೆಗಷ್ಟೇ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತಿದ್ದೇವೆ. ಚುನಾವಣೆ ಮುಗಿದು ನಾಲ್ಕು ತಿಂಗಳು ಕಳೆದರೂ ಪರಿಸ್ಥಿತಿ ಬದಲಾಗಿಲ್ಲ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಲಿಷ್ಠವಾಗಿ ಬೆಳೆಯುತ್ತಿತ್ತು. ಇದೀಗ ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗುತ್ತದೆ. ಪಕ್ಷದಲ್ಲಿ ಒಕ್ಕಲಿಗ ನಾಯಕರ ಮಾತುಗಳಿಗೂ ಬೆಲೆ ಇಲ್ಲದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ಪಕ್ಷವು ನನಗೆ ಎಲ್ಲವನ್ನೂ ನೀಡಿದೆ. ರಾಜ್ಯದಲ್ಲಿ ಅತ್ಯಂತ ಬಲಿಷ್ಠವಾಗಿದ್ದ ಪಕ್ಷಕ್ಕೆ ಈ ಸ್ಥಿತಿ ಬಂದಿರುವುದರ ಬಗ್ಗೆ ನೋವಿದೆ. ಅದನ್ನು ಸರಿಪಡಿಸಬೇಕು ಎಂಬುದಷ್ಟೇ ನನ್ನ ಆಗ್ರಹ. ನಾನಿನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ವಾಸ್ತವ ವಿಚಾರಗಳನ್ನು ಮಾತನಾಡಲು ನನಗೆ ಯಾವ ರೀತಿಯ ಭಯವೂ ಇಲ್ಲ ಎಂದು ಹೇಳಿದರು.