ಸೆ.29ರಂದು ಕರ್ನಾಟಕ ಬಂದ್ ಹಿಂಪಡೆಯುವುದಿಲ್ಲ: ಕನ್ನಡಪರ ಹೋರಾಟಗಾರರು, ಇಂದು ವಿಧಾನಸೌಧ ಗಾಂಧಿ ಪ್ರತಿಮೆ ಮುಂದೆ ಬಿಜೆಪಿ-ಜೆಡಿಎಸ್ ಜಂಟಿ ಪ್ರತಿಭಟನೆ
ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೊರತೆಯಿಂದ ತೀವ್ರ ಬರಗಾಲ ಉಂಟಾಗಿರುವಾಗ ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ಮಾಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಹಿರಿಯ ಚಳವಳಿಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಾಡಿದ್ದು ಅಂದರೆ ಸೆಪ್ಟೆಂಬರ್ 29ರಂದು ಶುಕ್ರವಾರ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ನಿನ್ನೆ ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣಾ ಸಮಿತಿ ಸಭೆ ನಡೆಸಿ ತಮಿಳುನಾಡಿಗೆ ಮತ್ತೆ 18 ದಿನ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ CWRC ಆದೇಶ ನೀಡಿದೆ. ನಾಳೆ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 15ರವರೆಗೆ ಪ್ರತಿನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚಿಸಿದೆ. ಇದರಿಂದ ರೈತರು ಮತ್ತಷ್ಟು ಆಕ್ರೋಶಗೊಂಡಿದ್ದು ಪ್ರತಿಭಟನೆ ಮುಂದುವರೆಸಿದ್ದಾರೆ.
ಇಂದು ಬಿಜೆಪಿ, ಜೆಡಿಎಸ್ ಜಂಟಿಯಾಗಿ ಪ್ರತಿಭಟನೆ: ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ, ಜೆಡಿಎಸ್ ಪ್ರತಿಭಟನೆ ನಡೆಸಲು ಮುಂದಾಗಿದೆ. ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಹೆಚ್ ಡಿ ಕುಮಾರಸ್ವಾಮಿ, ಸದಾನಂದಗೌಡ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ. ಮಂಡ್ಯ, ರಾಮನಗರ, ಮೈಸೂರು ಸೇರಿದಂತೆ ಅನೇಕ ಕಡೆ ಪ್ರತಿಭಟನೆ ಮುಂದುವರೆಯಲಿದೆ.
ಬೆಂಗಳೂರು ಬಂದ್ ಬೇಡ ಎಂದಿದ್ದ ವಾಟಾಳ್: ನಿನ್ನೆ ಅಂದರೆ ಸೆಪ್ಟೆಂಬರ್ 26ರಂದು ಮಂಗಳವಾರ ಬೆಂಗಳೂರು ಬಂದ್ ಮಾಡಲಾಗಿತ್ತು. ಆದರೆ, ಈ ನಿರ್ಧಾರವನ್ನು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರಿಗೆ ತಿಳಿಸಿ, ಅವರ ನೇತೃತ್ವದಲ್ಲಿರುವ ಕೆಲವು ಕನ್ನಡ ಪರ ಸಂಘಟನೆಗಳ ಬೆಂಬಲವನ್ನು ಬೆಂಗಳೂರು ಬಂದ್ ಗೆ ಸಿಗುವಂತೆ ಮಾಡಲು ಪ್ರಯತ್ನ ಮಾಡಿದಾಗ, ವಾಟಾಳ್ ನಾಗರಾಜ್ ಅವರು ಬೆಂಗಳೂರು ಬಂದ್ ಗೆ ಒಪ್ಪಿರಲಿಲ್ಲ.