ಏಷ್ಯನ್ ಗೇಮ್ಸ್ ಮಹಿಳಾ ಟಿ20 ಕ್ರಿಕೆಟ್ ಫೈನಲ್: ಶ್ರೀಲಂಕಾ ವಿರುದ್ಧ ಜಯ, ಚಿನ್ನ ಗೆದ್ದ ಭಾರತ ತಂಡ
ಹ್ಯಾಂಗ್ ಝೌ: ಏಷ್ಯನ್ ಗೇಮ್ಸ್ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ ಮಹಿಳಾ ತಂಡ ಐತಿಹಾಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ.
ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ನಡೆದೆ ಮಹಿಳಾ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಭಾರತ ತಂಡ 19ರನ್ ಗಳ ಅಂತರದಲ್ಲಿ ಮಣಿಸಿ ಮೊದಲ ಬಾರಿಗೆ ಚಿನ್ನದ ಪದಕ ಬಾಚಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಶ್ರೀಲಂಕಾಗೆ ಗೆಲ್ಲಲು ಕೇವಲ 117ರನ್ ಗಳ ಸಾಧಾರಣ ಗುರಿ ನೀಡಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರ ತಂಡ ನಿಗಧಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 116 ರನ್ ಗಳನ್ನಷ್ಟೇ ಕಲೆಹಾಕಿದೆ. ಭಾರತದ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ (46 ರನ್, 45 ಎಸೆತ)ಮತ್ತು ಜೆಮಿಮಾ ರೋಡ್ರಿಗಸ್ (42 ರನ್, 40 ಎಸೆತ) ಅವರನ್ನು ಹೊರತು ಪಡಿಸಿದರೆ ಉಳಿದಾವ ಆಟಗಾರ್ತಿಯರೂ ಕೂಡ ಎರಡಂಕಿ ಮೊತ್ತ ದಾಟಲಿಲ್ಲ.
ಶಫಾಲಿ ವರ್ಮಾ 9 ರನ್ ಗಳಿಸಿ ಔಟಾದರೆ, ರಿಚಾ ಘೋಷ್ 9, ನಾಯಕಿ ಹರ್ಮನ್ ಪ್ರೀತ್ ಕೌರ್ 2, ಪೂಜಾ ವಸ್ತ್ರಾಕರ್ 2 ರನ್ ಗಳನ್ನು ಮಾತ್ರಗಳಿಸಿ ನಿರಾಶೆ ಮೂಡಿಸಿದರು. ಶ್ರೀಲಂಕಾ ಪರ ಉದೇಶಿಕ ಪ್ರಬೋಧನಿ, ಸೌಗಂದಿಕಾ ಕುಮಾರಿ ಮತ್ತು ಇನೋಕಾ ರಣವೀರಾ ತಲಾ 2 ವಿಕೆಟ್ ಪಡೆದು ಮಿಂಚಿದರು. ಇದೀಗ ಶ್ರೀಲಂಕಾ ತಂಡ ಗೆಲ್ಲಲು 20 ಓವರ್ ನಲ್ಲಿ 117ರನ್ ಕಲೆಹಾಕಬೇಕಿದೆ.
ಭಾರತ ನೀಡಿದ 118ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಶ್ರೀಲಂಕಾ ವನಿತೆಯರ ತಂಡ ನಿಗದಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 97ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 19ರನ್ ಗಳ ಅಂತರದಲ್ಲಿ ಸೋಲು ಕಂಡಿತು. ಆರಂಭಿಕ ಹಂತದಲ್ಲಿ ಬಿದ್ದ ಸತತ ವಿಕೆಟ್ ಗಳು ಶ್ರೀಲಂಕಾ ತಂಡಕ್ಕೆ ಮುಳುವಾಯಿತು.
ಭಾರತ ಪರ ಟಿಟಾಸ್ ಸಧು 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರೆ, ರಾಜೇಶ್ವರಿ ಗಾಯಕ್ವಾಡ್ 2, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್ ಮತ್ತು ದೇವಿಕಾ ವೈದ್ಯ ತಲಾ 1 ವಿಕೆಟ್ ಪಡೆದರು. ಶ್ರೀಲಂಕಾ ಪರ ಹಸಿನಿ ಪರೇರಾ 25ರನ್, ನಿಲಾಕ್ಷಿ ಡಿಸಿಲ್ವಾ 23ರನ್ ಮತ್ತು ಒಶಾಧಿ ರಣಸಿಂಘೆ 19ರನ್ ಗಳಿಸಿದರು.