Log In
BREAKING NEWS >
ನವೆ೦ಬರ್ 27ರ೦ದು ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ಜರಗಲಿದೆ...

ಮುಂದಿನ 15 ದಿನಗಳವರೆಗೆ ಕರ್ನಾಟಕ ತಮಿಳು ನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ಸುಪ್ರೀಂ ಕೋರ್ಟ್ ನಲ್ಲಿ ಇಂದು ಗುರುವಾರ ನಮ್ಮ ಪರವಾಗಿ ಆದೇಶ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಕರ್ನಾಟಕಕ್ಕೆ ನಿರಾಸೆಯಾಗಿದೆ. ಕಾವೇರಿ ಜಲ ಹಂಚಿಕೆ ವಿವಾದ ಕೇಸಿನಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಮಂಡಿಸಿದ ಕರ್ನಾಟಕದ ವಾದ ಫಲ ಕೊಟ್ಟಿಲ್ಲ. ತೀರ್ಪು ತಮಿಳು ನಾಡು ಪರವಾಗಿದೆ.

ಮುಂದಿನ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳು ನಾಡಿಗೆ ಬಿಡಬೇಕೆಂದು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಆದೇಶ ನೀಡಿದೆ. ಈ ಮೂಲಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(CWMA) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ(CWRC)ಯ ಆದೇಶವನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಸೂಚಿಸಿದೆ.

ನ್ಯಾಯಾಲಯ ಇಂದು ಬೆಳಗ್ಗೆ 10.30ಕ್ಕೆ ವಿಚಾರಣೆ ಆರಂಭಿಸಿತು. ತಮಿಳುನಾಡು ಪರ ವಕೀಲರಾದ ಮುಕುಲ್​ ರೋಹಟಗಿ ಮತ್ತು ಕರ್ನಾಟಕದ ಪರ ವಕೀಲ ಶ್ಯಾಮ್​ ದಿವಾನ್​ ತಮ್ಮ ತಮ್ಮ ವಾದವನ್ನು ಮಂಡಿಸಿದರು.

ಪ್ರಸ್ತುತ ನೀರಿನ ಸಂಕಷ್ಟ ಇದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ, ಸಂಕಷ್ಟ ಸೂತ್ರವನ್ನು ಕರ್ನಾಟಕ ಪಾಲಿಸುತ್ತಿಲ್ಲ. ನಾವು ಬಹಳಷ್ಟು ಕಡಿಮೆ ನೀರನ್ನು ಪಡೆಯುತ್ತಿದ್ದೇವೆ ಎಂದು ತಮಿಳುನಾಡು ಪರ ವಕೀಲ ಮುಕುಲ್​ ರೋಹಟಗಿ ವಾದ ಮಂಡನೆ ಮಾಡಿದರು.

ಕರ್ನಾಟಕ ಪರ ವಾದ ಮಂಡಿಸಿದ ಶ್ಯಾಮ್​ ದಿವಾನ್​, ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ನಾವು ಪಾಲಿಸಿದ್ದೇವೆ ಎಂದರು.

ವಾದ-ವಿವಾದಗಳನ್ನು ಆಲಿಸಿದ ಬಳಿಕ ನ್ಯಾಯಮೂರ್ತಿ ಬಿ.ಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ತಮಿಳುನಾಡಿಗೆ ನೀರು ಹರಿಸಲು ಆದೇಶ ಹೊರಡಿಸಿತು. ಇದರಿಂದ ಕರ್ನಾಟಕಕ್ಕೆ ಸುಪ್ರೀಂಕೋರ್ಟ್​ನಲ್ಲೂ ಹಿನ್ನೆಡೆಯಾಗಿದೆ.

ತಮಿಳುನಾಡಿಗೆ ಸದ್ಯಕ್ಕೆ ಕರ್ನಾಟಕ 5,000 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸುವಂತೆ ಸುಪ್ರೀಂ ಕೋರ್ಟ್ ಪ್ರಾಧಿಕಾರಕ್ಕೆ ಸೂಚಿಸಿದೆ.

No Comments

Leave A Comment