ಚಿಕ್ಕಮಗಳೂರಿನಲ್ಲಿ ಸರಣಿ ಅಪಘಾತ: ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ದುರ್ಮರಣ; 14 ತಿಂಗಳ ಮಗು ಸ್ಥಿತಿ ಗಂಭೀರ
ಚಿಕ್ಕಮಗಳೂರು: ಕಡೂರು- ಮೂಡಿಗೆರೆ ಹೆದ್ದಾರಿ ಹಿರೇಗೌಜ ಬಳಿ ಟಿಪ್ಪರ್ ಲಾರಿ, ಕಾರು ಮತ್ತು ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿ ದಂಪತಿ ಮೃತಪಟ್ಟಿದ್ದು, 14 ತಿಂಗಳ ಮಗುವಿನ ಸ್ಥಿತಿ ಗಂಭೀರವಾಗಿದೆ.
ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಸಮೀಪ ಭೀಕರ ಸರಣಿ ಅಪಘಾತ ಸಂಭವಿಸಿದ್ದು ದಂಪತಿ ಸ್ಥಳದಲ್ಲೇ ಸಾವನ್ನಪಿದ್ದರೆ, ಅವರ 14 ತಿಂಗಳ ಮಗು ಗಂಭೀರವಾಗಿ ಗಾಯಗೊಂಡಿದೆ.
ಕಾರು, ಟಿಪ್ಪರ್ ಲಾರಿ, ಬೈಕ್ ನಡುವೆ ಅಪಘಾತ ನಡೆದಿದ್ದು, ಬೈಕ್‌ನಲ್ಲಿದ್ದ ದಂಪತಿ ಶಿವಮೊಗ್ಗ ಮೂಲದ ಸಯ್ಯದ್ ಆಸೀಫ್ (38), ಮಾಜಿನಾ (33) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಜತೆಗಿದ್ದ 14 ತಿಂಗಳ ಮಗುವಿಗೆ ಗಂಭೀರ ಗಾಯಗಳಾಗಿವೆ.
ದಂಪತಿ ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ವೇಳೆ ಕಾರು, ಬೈಕ್ ಮತ್ತು ಲಾರಿ ಮಧ್ಯೆ ಈ ಅವಘಡ ಸಂಭವಿಸಿದೆ. ಟಿಪ್ಪರ್ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕಳೆದ ರಾತ್ರಿ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಕಣಿವೆ ಕ್ರಾಸ್ ಬಳಿ ಕೆಲವು ದಿನಗಳ ಹಿಂದಷ್ಟೇ ನಡೆದ ಅಪಘಾತದಲ್ಲಿ ತಾಯಿ ಮತ್ತು ಮಗ ಮೃತಪಟ್ಟಿದ್ದರು. ಕಾರೊಂದು ನಿಯಂತ್ರಣ ತಪ್ಪಿ ಸೇತುವೆಗೆ ಬಡಿದು ಈ ದುಂತ ಸಂಭವಿಸಿತ್ತು. ಮೃತಪಟ್ಟವರನ್ನು ಚೆನ್ನಮ್ಮ (67) ಮತ್ತು ಅವರ ಮಗ ನಿರಂಜನ್ (42) ಎಂದು ಗುರುತಿಸಲಾಗಿದೆ.
ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆ ನಿವಾಸಿಯಾಗಿರುವ ನಿರಂಜನ್ ಅವರು ತಮ್ಮ ತಾಯಿಯನ್ನು ಕರೆದುಕೊಂಡು ಚಿಕ್ಕಮಗಳೂರಿನಿಂದ ಕಡೂರಿಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಕಾರು ಸೇತುವೆಗೆ ಡಿಕ್ಕಿ ಹೊಡೆದು ಅಲ್ಲೇ ಸಿಕ್ಕಿಹಾಕಿಕೊಂಡಿದೆ. ಡಿಕ್ಕಿಯ ಹೊಡೆತಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ತಾಯಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು.
ಕಾರಿನಲ್ಲಿ ಕಾರಿನಲ್ಲಿ ಸಿಲುಕಿದ್ದ ನಿರಂಜನ್ ಅವರನ್ನು ರಕ್ಷಿಸಲು ಸ್ಥಳೀಯರು ಹರಸಾಹಸ ಮಾಡಿದರು. ಹಾಗೆ ಹೊರತೆಗೆದ ಬಳಿಕ ಆಸ್ಪತ್ರೆಗೆ ಸಾಗಿಸಿದರು. ಆದರೆ, ಸ್ವಲ್ಪ ದೂರ ಹೋಗುವಷ್ಟರಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ. ನಿರಂಜನ್ ಅವರು ಖಾಸಗಿ ಆಸ್ಪತ್ರೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.
Related