Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಬಿಟ್‌ಕಾಯಿನ್ ಹಗರಣ: ಬೆಂಗಳೂರಿನ ಆರೋಪಿಗಳ ಮನೆಗಳ ಮೇಲೆ ಎಸ್‌ಐಟಿ ದಾಳಿ

ಬೆಂಗಳೂರು: ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಆರೋಪಿಗಳ ಕಿಂಗ್‌ಪಿನ್ ಸೇರಿದಂತೆ ಪ್ರಮುಖ ಆರೋಪಿಗಳ ನಿವಾಸಗಳ ಮೇಲೆ ದಾಳಿ ವಿಶೇಷ ತನಿಖಾ ತಂಡ(ಎಸ್‌ಐಟಿ) ನಡೆಸುತ್ತಿದೆ.

ಜಯನಗರದಲ್ಲಿರುವ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಅವರ ನಿವಾಸದ ಮೇಲೆ ದಾಳಿ ನಡೆಯುತ್ತಿದೆ. ಬೆಂಗಳೂರಿನ ಸದಾಶಿವನಗರ ಬಡಾವಣೆಯಲ್ಲಿರುವ ಇತರ ಆರೋಪಿಗಳಾದ ಸುನೀಶ್ ಹೆಗ್ಡೆ ಮತ್ತು ಪ್ರಸಿದ್ಧ್ ಅವರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ. ಅಧಿಕಾರಿಗಳು ನಿನ್ನೆ ನ್ಯಾಯವ್ಯಾಪ್ತಿಯ ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದಿದ್ದು, ಮುಂಜಾನೆಯಿಂದ ದಾಳಿ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಸಂಕೀರ್ಣ ಪ್ರಕರಣದಲ್ಲಿ ಇಸ್ರೇಲ್ ಅಧಿಕಾರಿಗಳ ನೆರವು ಪಡೆಯುವ ಬಗ್ಗೆ ರಾಜ್ಯ ಪೊಲೀಸ್ ಇಲಾಖೆ ಚಿಂತನೆ ನಡೆಸುತ್ತಿದೆ.

ರಾಜ್ಯದ ಬಿಜೆಪಿಯ ಉನ್ನತ ನಾಯಕರು ಭಾಗಿಯಾಗಿದ್ದಾರೆ ಎನ್ನಲಾದ ಬಿಟ್‌ಕಾಯಿನ್ ಹಗರಣದ ಮರುತನಿಖೆಗೆ ನಿರ್ದೇಶನ ನೀಡಿ ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು. ತನಿಖೆಯನ್ನು ಕೈಗೆತ್ತಿಕೊಳ್ಳಲು ಅಪರಾಧ ತನಿಖಾ ಇಲಾಖೆ (ಸಿಐಡಿ) ಅಡಿಯಲ್ಲಿ ಎಸ್‌ಐಟಿ ರಚಿಸಲಾಗಿದೆ.

ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಹ್ಯಾಕರ್ ಶ್ರೀಕೃಷ್ಣನನ್ನು ಬಂಧಿಸಿದ ನಂತರ ಬಿಟ್‌ಕಾಯಿನ್ ಹಗರಣ ಹೊರಗೆ ಬಂದಿತ್ತು. ಆರೋಪಿ ಹ್ಯಾಕರ್‌ನನ್ನು ಬಳಸಿಕೊಂಡು ಆಡಳಿತಾರೂಢ ಬಿಜೆಪಿ ನಾಯಕರು 2020ರಲ್ಲಿ ಕಸ್ಟಡಿಯಲ್ಲಿ ಹಗರಣ ನಡೆಸಲು ಅವಕಾಶ ಮಾಡಿಕೊಟ್ಟು ಭಾರಿ ಹಣ ಸಂಪಾದಿಸಿದ್ದರು ಎಂದು ಆರೋಪಿಸಲಾಗಿತ್ತು.

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳು ಆನ್‌ಲೈನ್ ಗೇಮಿಂಗ್ ಕಂಪನಿಗಳು ಮತ್ತು ಸರ್ಕಾರಿ ವೆಬ್ ಪೋರ್ಟಲ್‌ಗಳನ್ನು ಹ್ಯಾಕ್ ಮಾಡುವ ಮೂಲಕ ಆರೋಪಿಗಳು 11 ಕೋಟಿ ರೂಪಾಯಿ ಪಡೆದು ಆ ಹಣವನ್ನು ಬಿಟ್‌ಕಾಯಿನ್‌ಗಳಾಗಿ ಪರಿವರ್ತಿಸಿ ಬೆಂಗಳೂರಿನಲ್ಲಿ ಮಾದಕ ವಸ್ತು ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ.

ಈ ಹಿಂದೆ ಕಾಂಗ್ರೆಸ್‌ನ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ತಮ್ಮ ಸರಣಿ ಟ್ವೀಟ್‌ಗಳಲ್ಲಿ ಬಿಟ್‌ಕಾಯಿನ್ ಹಗರಣದ ಕುರಿತು ಬಿಜೆಪಿ ಕೇಂದ್ರ ನಾಯಕತ್ವ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಸುಮಾರು 5000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಬಿಟ್‌ ಕಾಯಿನ್‌ ವರ್ಗಾವಣೆ ಪ್ರಕರಣ ಇದಾಗಿದೆ. ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಹಾಗೂ ಆತನ ಸಹಚರ ರಾಬಿನ್‌ ಖಂಡೇಲ್‌ವಾಲ್‌ ಎಂಬುವವನನ್ನು 2020ರ ನವೆಂಬರ್‌ 24ರಂದು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಸುಮಾರು 100 ದಿನಗಳ ಕಾಲ ವಿಚಾರಣೆ ನಡೆಸಲಾಗಿದೆ. 5 ತಿಂಗಳ ನಂತರ 2021ರ ನಂತರ 2021ರ ಏಪ್ರಿಲ್‌ 17ರಂದು ಆರೋಪಿ ಜಾಮೀನು ಪಡೆದಿದ್ದಾನೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದರು.

No Comments

Leave A Comment