ಮಡಿಕೇರಿ: ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ; ನೆಲಕ್ಕುರುಳಿದ ಜನರಲ್ ತಿಮ್ಮಯ್ಯ ಪ್ರತಿಮೆ
ಮಡಿಕೇರಿ: ಸೋಮವಾರ ನಸುಕಿನ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಿವಂಗತ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಪ್ರತಿಮೆಗೆ ಧಕ್ಕೆಯಾಗಿದೆ. ಹಿಂದಿನ ವರ್ಷಗಳಲ್ಲಿ ಸಾಕಷ್ಟು ಹೋರಾಟದ ನಂತರ ಸ್ಥಾಪಿಸಲಾದ ಈ ಪ್ರತಿಮೆ ಸುಮಾರು 50 ವರ್ಷ ಹಳೆಯದು. ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಪ್ರತಿಮೆ ಇದ್ದ ವೃತ್ತಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದು ಕೆಳಗೆ ಬಿದ್ದಿದೆ.
ಬೆಳಗ್ಗೆ 5.45ರ ಸುಮಾರಿಗೆ ಮಡಿಕೇರಿಯಿಂದ ಮಂಗಳೂರಿಗೆ ತೆರಳಬೇಕಿದ್ದ ಕೆಎಸ್‌ಆರ್‌ಟಿಸಿ ಬಸ್, ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ಡಿಪೋದಿಂದ ಬಸ್ ನಿಲ್ದಾಣದ ಕಡೆಗೆ ಹೊರಟಿತು. ಜನರಲ್ ತಿಮ್ಮಯ್ಯ ವೃತ್ತದ ಅಡ್ಡರಸ್ತೆಯಲ್ಲಿ ಪಿಕಪ್ ವಾಹನವೊಂದು ಹಠಾತ್ತನೆ ತಿರುಗಿದ್ದು, ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿ ಪ್ರತಿಮೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನ ಗಾಜು ಒಡೆದಿದ್ದು, ಕಂಡಕ್ಟರ್ ವಾಹನದಿಂದ ಹೊರಕ್ಕೆ ಬಿದ್ದಿದ್ದಾರೆ. ಅದೃಷ್ಟವಶಾತ್ ಬಸ್‌ನಲ್ಲಿ ಪ್ರಯಾಣಿಕರಿಲ್ಲದ್ದರಿಂದ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಳಗಿನ ವಾಕಿಂಗ್ನಲ್ಲಿ ನಿರತರಾಗಿದ್ದ ಬೆರಳೆಣಿಕೆಯಷ್ಟು ಜನರು ಸ್ಥಳಕ್ಕೆ ಧಾವಿಸಿ, ಗಾಯಗೊಂಡ ಕಂಡಕ್ಟರ್ ಪುಟ್ಟಸ್ವಾಮಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ಸುಂದರ್ ರಾಜ್, ಸಿಐ ಅನೂಪ್ ಮಾದಪ್ಪ ಸೇರಿದಂತೆ ಮಡಿಕೇರಿ ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಬಸ್ ಚಾಲಕ ಕೊಟ್ರೇಗೌಡ (36)ನನ್ನು ವಶಕ್ಕೆ ಪಡೆದಿದ್ದಾರೆ. ನಿರ್ಲಕ್ಷ್ಯದ ಚಾಲನೆ ಮತ್ತು ಸಾರ್ವಜನಿಕ ಆಸ್ತಿ ಹಾನಿಗಾಗಿ ಚಾಲಕನ ವಿರುದ್ಧ ಸೆಕ್ಷನ್ 279 ಮತ್ತು 427 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.