Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಉಡುಪಿ ವಾಶ್ ರೂಂ ವಿಡಿಯೋ ಪ್ರಕರಣ: ಮೊದಲ ಹಂತದ ತನಿಖೆ ಪೂರ್ಣಗೊಳಿಸಿದ ಸಿಐಡಿ

ಮಂಗಳೂರು: ಉಡುಪಿಯ ನೇತ್ರಾ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ತನಿಖಾ ಇಲಾಖೆ(ಸಿಐಡಿ) ತನ್ನ ಮೊದಲ ಹಂತದ ತನಿಖೆಯನ್ನು ಪೂರ್ಣಗೊಳಿಸಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ತನಿಖಾಧಿಕಾರಿ(ಐಒ) ಸಿಐಡಿ ಡಿವೈಎಸ್ಪಿ ಅಂಜುಮಾಲಾ ನಾಯಕ್ ನೇತೃತ್ವದ ತನಿಖಾ ತಂಡ, ಈಗಾಗಲೇ ಉಡುಪಿಯ ನೇತ್ರ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಮತ್ತು ಸಂತ್ರಸ್ತೆ, ಆರೋಪಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಯ ಪ್ರತಿನಿಧಿಗಳ ಹೇಳಿಕೆ ದಾಖಲಿಸಿದೆ ಎಂದು ಅವರು ಹೇಳಿದ್ದಾರೆ.

ಜುಲೈ 19 ರಂದು ನಡೆದಿದೆ ಎನ್ನಲಾದ ಈ ಘಟನೆಯು ರಾಜ್ಯದಲ್ಲಿ ತೀವ್ರ ವಿವಾದಕ್ಕೆ ನಾಂದಿ ಹಾಡಿತ್ತು. ಇದರ ಹಿಂದೆ ಪಿತೂರಿ ಇದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ ಮತ್ತು ತನಿಖೆಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಬೇಕು ಎಂದು ಒತ್ತಾಯಿಸಿತ್ತು.

ಘಟನೆಯ ಬಗ್ಗೆ ಸಂತ್ರಸ್ತೆ ಅಧಿಕೃತವಾಗಿ ದೂರು ನೀಡದಿದ್ದರೂ, ಉಡುಪಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಡಿವೈಎಸ್ಪಿ ಮಟ್ಟದ ತನಿಖೆ ಪ್ರಾರಂಭಿಸಿದ್ದರು. ಆದರೆ ಬಿಜೆಪಿ ಪ್ರತಿಭಟನೆ ಮುಂದುವರಿಸಿದ ನಂತರ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ.

ಆ.8ರಂದು ಉಡುಪಿಗೆ ಆಗಮಿಸಿದ್ದ ಸಿಐಡಿ ತಂಡ, ಸ್ಥಳ ಪರಿಶೀಲನೆ ನಡೆಸಿ, ಸಂತ್ರಸ್ತೆ, ಕಾಲೇಜು ಆಡಳಿತ ಮಂಡಳಿ ಹಾಗೂ ಆರೋಪಿ ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು, ಬೆರಳಚ್ಚು ಸಂಗ್ರಹಿಸಿ ಈ ಹಿಂದೆ ಪೊಲೀಸರು ಸಂಗ್ರಹಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿತು.

ಆರೋಪಿ ವಿದ್ಯಾರ್ಥಿನಿಯರಿಂದ ವಶಪಡಿಸಿಕೊಂಡ ಮೂರು ಮೊಬೈಲ್ ಫೋನ್‌ಗಳ ಕುರಿತು ತನಿಖಾಧಿಕಾರಿಗಳು ಈಗ ಹೈದರಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‌ಎಸ್‌ಎಲ್) ವರದಿಗಾಗಿ ಕಾಯುತ್ತಿದ್ದಾರೆ.

ಎಫ್‌ಎಸ್‌ಎಲ್ ವರದಿ ಪಡೆದ ನಂತರ ಸಿಐಡಿ ಅಧಿಕಾರಿಗಳ ತಂಡ, ತಮ್ಮ ತನಿಖಾ ವರದಿಯನ್ನು ಸಿದ್ಧಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.

No Comments

Leave A Comment