Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಬಿಟ್‌ಕಾಯಿನ್ ಹಗರಣ: ಸಿಸಿಬಿ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್ ದಾಖಲು!

ಬೆಂಗಳೂರು: ಬಹುಕೋಟಿ ಬಿಟ್‌ಕಾಯಿನ್ ಹಗರಣದ ತನಿಖೆ ಮಹತ್ವದ ತಿರುವೊಂದನ್ನು ಪಡೆದುಕೊಂಡಿದೆ, ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ ಅಧಿಕಾರಿಗಳ ವಿರುದ್ಧವೇ ಹೊಸದಾಗಿ ಎಫ್‌ಐಆರ್ ದಾಖಲಾಗಿದೆ.

ಸಿಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಡಿಜಿಟಲ್ ಸಾಧನಗಳನ್ನು ತಿರುಚಲಾಗಿದೆ ಎಂಬ ವಿಚಾರ ವಿಧಿವಿಜ್ಞಾನ ಪರೀಕ್ಷೆಗಳಿಂದ ಬಹಿರಂಗವಾದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ ದೂರಿನ ಆಧಾರದ ಮೇರೆಗೆ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ.

ಬಿಟ್ ಕಾಯಿನ್ ಹಗರಣವನ್ನು ರಾಜ್ಯ ಸರ್ಕಾರ ಸಿಐಡಿಯ ವಿಶೇಷ ತನಿಖಾ ತಂಡಕ್ಕೆ ವಹಿಸಿದ್ದು, ಎಸ್ಐಟಿ ಅಧಿಕಾರಿಗಳು ಈಗಾಗಲೇ ನಾನಾ ದೃಷ್ಟಿಕೋನಗಳಿಂದ ತನಿಖೆ ನಡೆಸುತ್ತಿದೆ. ಇದರಂತೆ ಈ ಹಿಂದೆ ನಡೆದಿದ್ದ ತನಿಖೆಯ ಮಾಹಿತಿಯನ್ನು ಕೆದಕಿದೆ.

ಆ ವೇಳೆ ಮೊಬೈಲ್ ಫೋನ್, ಲ್ಯಾಪ್ಟಾಪ್, ಕಂಪ್ಯೂಟರ್, ಹಾರ್ಡ್ ಡಿಸ್ಕ್ , ಪೆನ್ಡ್ರೈವ್ಗಳನ್ನು ವಶಕ್ಕೆ ಪಡೆದು ವಿವಿಜ್ಞಾನ ಪ್ರಯೋಗಾಲದ ಪರೀಕ್ಷೆಗೊಳಪಡಿಸಿತ್ತು. ಆ ವರದಿಗಳನ್ನು ಎಸ್ಐಟಿ ಪಡೆದುಕೊಂಡು ಪುನರ್ ಪರಿಶೀಲನೆ ನಡೆಸುತ್ತಿದೆ.

ಈ ವೇಳೆ ಮೂಲ ಕಡತಗಳಷ್ಟೇ ಅಲ್ಲದೆ, ಕೆಲವು ಹೆಚ್ಚುವರಿ ಫೈಲ್ಗಳು ಇರುವುದು ಪರಿಶೀಲನೆ ವೇಳೆ ಕಂಡುಬಂದಿದೆ. 2020 ಸೆಪ್ಟೆಂಬರ್ 9ರಿಂದ ಡಿಸೆಂಬರ್ 16ರ ನಡುವೆ ಅಕ್ರಮಗಳು ನಡೆದಿವೆ ಎಂಬ ಆರೋಪಗಳಿವೆ. ಈ ಕುರಿತು ಹಲವಾರು ಕಡೆ ದಾಳಿ ನಡೆಸಿ, ಮಾಹಿತಿ ಕಲೆ ಹಾಕಲಾಗಿತ್ತು.

ಆದರೆ ಈ ರೀತಿ ಸಂಗ್ರಹಿಸಲಾದ ಸಾಕ್ಷ್ಯಗಳನ್ನು ತಿರುಚಲಾಗಿದೆ ಎಂಬ ಮಾಹಿತಿ ತನಿಖೆ ವೇಳೆ ತಿಳಿದುಬಂದಿದೆ.  ಆ ದಿನ ತನಿಖಾಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡು ಒಳಸಂಚು ನಡೆಸಿದ್ದಾರೆ ಎಂಬ ಆರೋಪಗಳಿದ್ದು, ಪ್ರಸ್ತುತ ಎಸ್ಐಟಿ ತನಿಖಾ ತಂಡ ಹಿಂದಿನ ತನಿಖಾಧಿಕಾರಿಗಳ ವಿರುದ್ಧ ದೂರು ನೀಡಿದೆ. ಅದರ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ನವೆಂಬರ್ 9, 2020 ರಂದು ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ಡಿಜಿಟಲ್ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನವೆಂಬರ್ 17 ರಂದು ಹಾರ್ಡ್ ಡಿಸ್ಕ್ ಮತ್ತು ಆಪಲ್ ಮ್ಯಾಕ್‌ಬುಕ್ ಅನ್ನು ವಶಪಡಿಸಿಕೊಳ್ಳಲಾಯಿತು ಮತ್ತು ನವೆಂಬರ್ 18 ಮತ್ತು 21 ರ ನಡುವೆ ಹೆಚ್ಚುವರಿ ಫೈಲ್‌ಗಳನ್ನು ರಚಿಸಲಾಗಿದೆ ಎಂದು ಪರೀಕ್ಷಾ ವರದಿಗಳು ಬಹಿರಂಗಪಡಿಸಿವೆ. ಅಂತೆಯೇ, ನವೆಂಬರ್ 20 ಮತ್ತು 21 ರ ನಡುವೆ ಮತ್ತೊಂದು ಮ್ಯಾಕ್‌ಬುಕ್‌ನಲ್ಲಿ ಹೆಚ್ಚುವರಿ ಫೈಲ್‌ಗಳನ್ನು ರಚಿಸಲಾಗಿದೆ.

“ಪ್ರಥಮ ತನಿಖೆ ಆಧಾರದಲ್ಲಿ ಈ ಅಪರಾಧವು 2020 ರ ನವೆಂಬರ್ 9 ಮತ್ತು ಡಿಸೆಂಬರ್ 16 ರ ನಡುವೆ ಸಿಸಿಬಿ ಕಚೇರಿ ಮತ್ತು ಇತರ ಸ್ಥಳಗಳಲ್ಲಿ ನಡೆದಿರುವಂತೆ ತೋರುತ್ತಿದೆ. ಸಿಸಿಬಿ ಮತ್ತು ಇತರ ಪೊಲೀಸ್ ಅಧಿಕಾರಿಗಳ ತನಿಖಾ ಅಧಿಕಾರಿಗಳು, ಕ್ರಿಮಿನಲ್ ಪಿತೂರಿ ನಡೆಸಿದ್ದು, ಹೆಚ್ಚುವರಿ ಫೈಲ್‌ಗಳನ್ನು ರಚಿಸಿದ್ದಾರೆ. ಸಾಕ್ಷ್ಯವನ್ನು ನಾಶಪಡಿಸುವ ಉದ್ದೇಶದಿಂದ ಮತ್ತು ಸಾಕ್ಷ್ಯವನ್ನು ತಿರುಚುವ ಉದ್ದೇಶದಿಂದ ಈ ರೀತಿ ಮಾಡಿರುವುದು ಸ್ಪಷ್ಟವಾಗುತ್ತಿದೆ. ಡಿಜಿಟಲ್ ಸಾಧನೆಗಳನ್ನು ವಶಪಡಿಸಿಕೊಂಡ ಹೊಸ ಫೈಲ್ ಗಳು ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸರ್ಕಾರ ಅವಧಿಯಲ್ಲಿನ ಎಲ್ಲಾ ಹಗರಣಗಳ ತನಿಖೆ: ನಾಳೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಸಾಧ್ಯತೆ

ಎಸ್ಐಟಿ ದೂರು ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳ ವಿರುದ್ಧ ಸೆಕ್ಷನ್ 204 (ಡಾಕ್ಯುಮೆಂಟ್ ಅಥವಾ ಎಲೆಕ್ಟ್ರಾನಿಕ್ ದಾಖಲೆಯನ್ನು ಸಾಕ್ಷ್ಯವಾಗಿ ನೀಡುವುದನ್ನು ತಡೆಯಲು ದಾಖಲೆಗಳನ್ನು ನಾಶಪಡಿಸುವುದು), 120 ಬಿ (ಅಪರಾಧ ಪಿತೂರಿ), 409 (ಕ್ರಿಮಿನಲ್ ಉಲ್ಲಂಘನೆ) ಮತ್ತು 426 (ಕಿಡಿಗೇಡಿತನ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ನಡುವೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಹೊಸದಾಗಿ ದಾಖಲಾಗಿರುವ ಪ್ರಕರಣದ ತನಿಖೆಯನ್ನೂ ಕೈಗೆತ್ತಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

No Comments

Leave A Comment