
‘ಮಣಿಪುರ ಮೂಲಕ ನೀವು ಭಾರತವನ್ನು ಕೊಂದಿದ್ದೀರಿ, ನೀವು ದೇಶಭಕ್ತನಲ್ಲ, ದೇಶದ್ರೋಹಿ’: ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಾಗ್ದಾಳಿ
ನವದೆಹಲಿ: ‘ಕಳೆದ ಬಾರಿ ನಾನು ಲೋಕಸಭೆ ಅಧಿವೇಶನದಲ್ಲಿ ಮಾತನಾಡಿದ್ದಾಗ ನನ್ನ ಮಾತುಗಳನ್ನು ಅದಾನಿ ಮೇಲೆ ಕೇಂದ್ರೀಕರಿಸಿದ್ದೆ. ಇದರಿಂದ ನಿಮ್ಮ ಹಿರಿಯ ನಾಯಕನಿಗೆ ನೋವಾಗಿರಬಹುದು. ಆ ನೋವು ನಿಮ್ಮ ಮೇಲೆ ಕೂಡ ಪರಿಣಾಮ ಬೀರಿರಬಹುದು ಎಂದು ನಾನು ಭಾವಿಸುತ್ತೇನೆ. ಅದಕ್ಕೆ ನಿಮ್ಮ ಬಳಿ ಇಂದು ಕ್ಷಮೆ ಕೋರುತ್ತೇನೆ. ಆದರೆ ಅಂದು ನಾನು ಆಡಿರುವ ಮಾತು ಸತ್ಯ. ಇವತ್ತು ಬಿಜೆಪಿಯಲ್ಲಿರುವ ನನ್ನ ಸ್ನೇಹಿತರು ಭಯಪಡಬೇಕಾಗಿಲ್ಲ, ಏಕೆಂದರೆ ನನ್ನ ಇಂದಿನ ಭಾಷಣ ಅದಾನಿ ಮೇಲೆ ಕೇಂದ್ರೀಕರಿಸಿಲ್ಲ”’ಹೀಗೆ ಹೇಳುತ್ತಲೇ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾದ ಮಾತುಗಳೊಂದಿಗೆ ಲೋಕಸಭೆಯಲ್ಲಿ ತಮ್ಮ ಮಾತುಗಳನ್ನು ಆರಂಭಿಸಿದರು ರಾಹುಲ್ ಗಾಂಧಿ.
ಮೋದಿ ಉಪನಾಮ ಕುರಿತು 2019ರಲ್ಲಿ ಕರ್ನಾಟಕದಲ್ಲಿ ಭಾಷಣವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಅದಕ್ಕೆ ಸಂಬಂಧಪಟ್ಟಂತೆ ಗುಜರಾತ್ ನಲ್ಲಿ ಕೋರ್ಟ್ ರಾಹುಲ್ ಗಾಂಧಿ ವಿರುದ್ಧ ತೀರ್ಪು ನೀಡಿದಾಗ ಅವರನ್ನು ಸ್ಪೀಕರ್ ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ್ದರು. ಕೋರ್ಟ್ ತೀರ್ಪಿನ ವಿರುದ್ಧ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಅದು ಇತ್ತೀಚೆಗೆ ರಾಹುಲ್ ಗಾಂಧಿ ವಿರುದ್ಧ ಶಿಕ್ಷೆಗೆ ತಡೆ ತಂದಿದ್ದರಿಂದ ಲೋಕಸಭೆ ಸದಸ್ಯರ ಅನರ್ಹತೆಯನ್ನು ಸ್ಪೀಕರ್ ವಾಪಸ್ ತೆಗೆದುಕೊಂಡು ಇದೀಗ ಸದನಕ್ಕೆ ಮತ್ತೆ ರಾಹುಲ್ ಗಾಂಧಿ ಮರಳಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಇತ್ತೀಚೆಗೆ ರಚನೆಯಾದ INDIA ಮೈತ್ರಿಕೂಟ ಅವಿಶ್ವಾಸ ನಿರ್ಣಯ ಮಂಡಿಸಿ ಅದರ ಮೇಲೆ ನಿನ್ನೆ ಮತ್ತು ಇಂದು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಯಲ್ಲಿ ಇಂದು ಮಾತನಾಡಿದ ರಾಹುಲ್ ಗಾಂಧಿ, ಮೊದಲಿಗೆ ನನ್ನನ್ನು ಮತ್ತೆ ಸಂಸತ್ ಸದಸ್ಯ ಸ್ಥಾನ ನೀಡಿದ್ದಕ್ಕೆ ಧನ್ಯವಾದಗಳು ಎಂದು ಮಾತು ಆರಂಭಿಸಿದರು.
ಸರ್ಕಾರದ ಮೇಲೆ ವಾಗ್ದಾಳಿ ನಡೆಸಿಕೊಂಡು ಮಾತು ಆರಂಭಿಸುವ ಬದಲು ಮಣಿಪುರ ಹಿಂಸಾಚಾರದ ವಿಷಯವನ್ನು ಬಿಂಬಿಸುವ ಬದಲು, ಇತ್ತೀಚೆಗೆ ಮುಕ್ತಾಯಗೊಂಡ ಭಾರತ್ ಜೋಡೋ ಯಾತ್ರಾ ಎಂಬ ದೇಶಾದ್ಯಂತದ ಮೆರವಣಿಗೆ ಬಗ್ಗೆ ಮಾತನಾಡಿದರು.
ಭಾರತ್ ಜೋಡೋ ಯಾತ್ರೆ: ಕಳೆದ 10 ವರ್ಷಗಳಿಂದ ಪ್ರತಿದಿನ ನನ್ನ ಮೇಲೆ ಏಕೆ ನಿಂದನೆ ಮಾಡುತ್ತಿದ್ದರು ಎಂದು ನಾನು ಅರ್ಥಮಾಡಿಕೊಳ್ಳಬೇಕಾಗಿತ್ತು. “ನಾನು ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದಾಗ, ಅದನ್ನು ಏಕೆ ಮಾಡುತ್ತಿದ್ದೇನೆ ಎಂದು ತಿಳಿದಿರಲಿಲ್ಲ, ಜನರು ನನ್ನನ್ನು ಕೇಳಿದರು – ನೀವು ಯಾಕೆ ಈ ಯಾತ್ರೆಗೆ ಹೋಗುತ್ತಿದ್ದೀರಿ, ಎಂದಾಗ ಅವರಿಗೆ ಏನು ಹೇಳಬೇಕೆಂದು ನನಗೆ ನಿಜವಾಗಿಯೂ ತಿಳಿದಿರಲಿಲ್ಲ. ದಿನಗಳೆದಂತೆ ಉದ್ದೇಶ ಅರ್ಥವಾಗುತ್ತಾ ಹೋಯಿತು.