ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಅಗಸ್ಟ್ 15ರ೦ದು ಉಡುಪಿಯಲ್ಲಿ ” ಕಾಶ್ಮೀರ ವಿಜಯ”ತಾಳಮದ್ದಳೆ ಕಾರ್ಯಕ್ರಮ

ಅಗಸ್ಟ್ 15ರ೦ದು ಉಡುಪಿಯ ಕಿದಿಯೂರು ಹೊಟೇಲ್ ನ ಶೇಷಶಯನ ಸಭಾಭವನದಲ್ಲಿ ” ಕಾಶ್ಮೀರ ವಿಜಯ”ತಾಳಮದ್ದಳೆ ಕಾರ್ಯಕ್ರಮವು ನಡೆಯಲಿದೆ ಈ ಬಗ್ಗೆ ಒ೦ದು ಲೇಖನ

ಭಾರತೀಯ ಕಲೆಗಳು ಧಾರ್ಮಿಕ ಹಿನ್ನೆಲೆ ಹೊಂದಿದ್ದು, ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಜನರಿಗೆ
ತಿಳಿಯಪಡಿಸುತ್ತಾ,  ದೇವಭಕ್ತಿಯೊಂದಿಗೆ ದೇಶಭಕ್ತಿ,  ಸಾಮಾಜಿಕ ಸಾಮರಸ್ಯ, ಸಾಮಾಜಿಕ ಹಿತಚಿಂತನೆ, ಜನಜಾಗೃತಿ ಮೂಡಿಸುವಂತಹ ಉದ್ದೇಶಗಳನ್ನು ಹೊಂದಿರುವುದು ಸರ್ವವಿದಿತ. ಪುರಾಣ-ಇತಿಹಾಸದ ಜ್ಞಾನಭಂಡಾರವನ್ನು ನೀಡುತ್ತಾ, ಮನೋರಂಜನೆಯೊಂದಿಗೆ ಮನೋವಿಕಾಸವನ್ನೊದಗಿಸುತ್ತಿರುವ ನಮ್ಮ ಕರಾವಳಿಯ ಅದ್ಭುತ ಹಾಗೂ ಜನಪ್ರಿಯ ಕಲೆಯಾದ ಯಕ್ಷಗಾನವು ಕೂಡಾ ಇದಕ್ಕೆ ಹೊಸತಲ್ಲ. ಕಳೆದ 33 ವರ್ಷಗಳಿಂದ ಯಕ್ಷಕಲಾ ಸೇವೆಯಲ್ಲಿ ತೊಡಗಿಸಿಕೊಂಡಿರುವ ಉಡುಪಿಯ ಸಂಘಟಕ ಸುಧಾಕರ ಆಚಾರ್ಯರ ಸಂಕಲ್ಪದ ಸಾಂಸ್ಕೃತಿಕ ವೇದಿಕೆ ‘ಸುಶಾಸನ ಉಡುಪಿ’ಯ ಸಂಯೋಜನೆಯಲ್ಲಿ ಖ್ಯಾತ ಪ್ರಸಂಗಕರ್ತ, ಉಪನ್ಯಾಸಕ ಪ್ರೊ. ಪವನ್ ಕಿರಣಕೆರೆಯ ಪರಿಕಲ್ಪನೆ ನಿರ್ದೇಶನದಲ್ಲಿ ‘ಕಾಶ್ಮೀರ ವಿಜಯ’ ಯಕ್ಷಗಾನ ತಾಳಮದ್ದಳೆ ಪ್ರಸಂಗವು ಈ ನಿಟ್ಟಿನಲ್ಲಿ ಭದ್ರ ಭರವಸೆಯನ್ನುಮೂಡಿಸಿದೆ.

ಕಾಶ್ಮೀರ ವಿಜಯದ ಪ್ರಥಮ ಹೆಜ್ಜೆ:-
ಪೌರಾಣಿಕ ಪ್ರಸಂಗಗಳೇ ಜೀವಾಳವಾಗಿರುವ ತಾಳಮದ್ದಳೆಯಲ್ಲಿ ಐತಿಹಾಸಿಕ ಹಾಗೂ ಪ್ರಚಲಿತ ವಿಷಯಗಳನ್ನು
ಯಕ್ಷಗಾನೀಯವಾಗಿ ಕಟ್ಟಿಕೊಟ್ಟು ಜನಜಾಗೃತಿ ಮೂಡಿಸುವುದು ಸುಲಭಸಾಧ್ಯವಲ್ಲ. 1947-48ರಲ್ಲಿ ಹಾಗೂ 70ನೇ
ಸ್ವಾತಂತ್ರ್ಯೋತ್ಸವದ (2016-17) ಎರಡು ಸಂದರ್ಭಗಳಲ್ಲೂ ಸಾಕ್ಷೀಭೂತರಾಗಿದ್ದ ಉಡುಪಿಯ ಪೇಜಾವರ ಶ್ರೀ ಶ್ರೀ
ವಿಶ್ವೇಶತೀರ್ಥರ ದಿವ್ಯ ಉಪಸ್ಥಿತಿಯಲ್ಲಿ ನಡೆದ, ಪತ್ರಕರ್ತ ಎಂ.ವಿ. ಹೆಗ್ಡೆ ವಿರಚಿತ ‘ಸ್ವರಾಜ್ಯವಿಜಯ’,
‘ಹೈದರಾಬಾದ್‍ವಿಜಯ’ ದಂತಹ ಐತಿಹಾಸಿಕ ತಾಳಮದ್ದಳೆಗಳನ್ನು ವಿಭಿನ್ನವಾಗಿ ಇತಿಹಾಸದ ಮರುಸೃಷ್ಟಿಗೊಳಿಸಿ,
ಸಂಘಟಿಸಿದ ಅನುಭವವಿರುವ ಸುಧಾಕರ ಆಚಾರ್ಯರ ಸಾಂಸ್ಕೃತಿಕ ಚಿಂತನೆ, ಸಮಾಜಮುಖಿ ಧೋರಣೆಯ
ಫಲಶ್ರುತಿಯಾಗಿ ಹೊರಹೊಮ್ಮಿದ ‘ಕಾಶ್ಮೀರ ವಿಜಯ’ ಪ್ರಸಂಗವು ಪೇಜಾವರ ಮಠಾಧೀಶ ಶ್ರೀ ಶ್ರೀ
ವಿಶ್ವಪ್ರಸನ್ನತೀರ್ಥರ ಗೌರವಾಧ್ಯಕ್ಷತೆ, ಪ್ರಮುಖರನ್ನೊಳಗೊಂಡ ‘ಸುಶಾಸನ ಸಮಿತಿ’ಯ ಸಂಯೋಜನೆಯಲ್ಲಿ 14
ಮತ್ತು 28 ಜನವರಿ 2023ರಂದು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಗಾನ ಸಾರಥ್ಯದಲ್ಲಿ ಉಡುಪಿ, ಮಂಗಳೂರು
ಹಾಗೂ ಮಣಿಪಾಲ ಶಿವಪಾಡಿಯಲ್ಲಿ ಪ್ರಯೋಗಗೊಂಡು ರಾಷ್ಟ್ರೀಯ-ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ
ಯಶಸ್ವಿಯಾಗಿದೆ.
ಅಗಸ್ಟ್ 5, 2019-ಕಾಶ್ಮೀರ ವಿಜಯ ದಿವಸ:
ಸ್ವತಂತ್ರ ಭಾರತ ಉದಯವಾಗುತ್ತಿದ್ದಂತೆಯೇ ಸಾಂವಿಧಾನಿಕವಾಗಿ ಭಾರತದಿಂದ ಪ್ರತ್ಯೇಕಗೊಂಡು ತನ್ನದೇ ಆದ
ರಾಜಕೀಯ, ಆರ್ಥಿಕ, ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ಸ್ವಾಯತ್ತೆಯನ್ನು ಹೊಂದಿದ್ದ ಕಾಶ್ಮೀರ ಅಖಂಡ
ಭಾರತದ ಏಕಸೂತ್ರದ ಪರಿಧಿಗೆ ಸೇರಿಸಲ್ಪಟ್ಟು, ನಾಲ್ಕು ವರ್ಷಗಳು ಕಳೆದಿವೆ. ಈ ನಿಟ್ಟಿನಲ್ಲಿ ಭಾರತದ ಸಾಹಿತ್ಯ,
ಸಂಸ್ಕೃತಿ ಹಾಗೂ ತತ್ವಜ್ಞಾನಗಳಿಗೆ ಅಪಾರ ಕೊಡುಗೆಯನ್ನು ನೀಡಿ ಶಾರದಾ ದೇಶವೆಂದೇ ಪ್ರಸಿದ್ಧವಾಗಿದ್ದ ಕಾಶ್ಮೀರದ
ಇತಿಹಾಸವನ್ನು ಕಲಾತ್ಮಕವಾಗಿ ಪರಿಚಯಿಸುವ ಕೆಲಸ ಇದಾಗಿದೆ.

ಶಾರದಾ ದೇಶದ ಪುಣ್ಯ ಚರಿತಾಮೃತ… ! :
ಪುರಾಣ, ಇತಿಹಾಸ ಹಾಗೂ ಪ್ರಚಲಿತವೆಂಬ ಮೂರು ಆಯಾಮಗಳಲ್ಲಿ ಸಾಗುವ ಕಾಶ್ಮೀರ ವಿಜಯದಲ್ಲಿ ಕಾಶ್ಮೀರಕ್ಕೆ
ಪ್ರತ್ಯೇಕ ಅಸ್ತಿತ್ವವನ್ನು ಒದಗಿಸಿದ್ದ, ಕಲಂ 370, ಕಲಂ 35ಎ ಗಳನ್ನು ರದ್ದುಪಡಿಸಿ, ಕಾಶ್ಮೀರವನ್ನು ಅಖಂಡ
ಭಾರತದೊಂದಿಗೆ ಸೇರಿಸುವುದೇ ಇದರ ಪ್ರಧಾನ ಕಥಾವಸ್ತು. ಕಶ್ಯಪ ಮಹರ್ಷಿಯಿಂದ ನಿರ್ಮಾಣವಾದ ಕಶ್ಯಪಮೈರಾ ಕಾಲಕ್ರಮೇಣ ಕಾಶ್ಮೀರವಾಯಿತು. ಶಾರದಾ ದೇಶವೆಂಬ ಹೆಗ್ಗಳಿಕೆಯನ್ನು ಪಡೆದು, ಜ್ಞಾನಭೂಮಿಯಾಗಿ ಸಮಸ್ತ ಭರತ ಮಣ್ಣಿನ ಜ್ಞಾನದೇಗುಲವಾಯಿತು. ಆದಿಶಂಕರರಿಂದ ಶಾರದಾಪೀಠದ ಪ್ರವೇಶವಾಗಿ ಅಲ್ಲಿನ ಶಾರದೆಯ ಮೂರ್ತಿಯ ಪ್ರೇರಣೆ ತುಂಗಾ ತೀರದಲ್ಲಿ ಶಾರದೆ ನೆಲೆಗೊಳ್ಳಲು ಕಾರಣವಾಯಿತು. ಇಂತಹ ಮೇಧೋತ್ತುಂಗ ಮೇದಿನಿಕಾಶ್ಮೀರ, 1947ರಲ್ಲಿ ಅಲ್ಲಿನ ಕೊನೆಯ ರಾಜ ಹರಿಸಿಂಗನ ಮೂಲಕ ಪ್ರತ್ಯೇಕ ಅಸ್ತಿತ್ವದ ಷರತ್ತಿನೊಂದಿಗೆ ಭಾರತದೊಂದಿಗೆ ಸೇರಿಕೊಂಡಿತು. ಗುಪ್ತಗಾಮಿನಿಯಾಗಿ ಹರಿಯುವ ಜ್ಞಾನಸರಸ್ವತಿಯ ಕಾಶ್ಮೀರವು 1990ರಲ್ಲಿ ಇತಿಹಾಸ ಕಂಡು ಕೇಳರಿಯದ ಹಿಂಸಾಕೃತ್ಯ ಕಾಶ್ಮೀರಿ ಪಂಡಿತರ ನರಮೇಧಕ್ಕೆ ಸಾಕ್ಷಿಯಾಯಿತು. ಭೂ-ಸ್ವರ್ಗವು ಅಕ್ಷರಾರ್ಥದಲ್ಲಿ ಹಿಂಸಾಭೂಮಿಯಾಗಿ ನರಕಯಾತನೆಯ ನೆಲೆವೀಡಾಯಿತು. ಇಂತಹ ಕಾಶ್ಮೀರಕ್ಕೆ ಪ್ರತ್ಯೇಕ ಅಸ್ತಿತ್ವವನ್ನು ಒದಗಿಸಿದ್ದ ಕಲಂ 370 ಹಾಗೂ 35ಎಗಳನ್ನು ರದ್ದುಪಡಿಸಿ, ಶಾರದಾದೇಶವೆಂಬ ಮಕುಟಮಣಿಯನ್ನು ತಾಯಿ ಭಾರತಿಗೆ ತೊಡಿಸುವ ಪುಣ್ಯ ಚರಿತಾಮೃತವೇ ‘ಕಾಶ್ಮೀರ ವಿಜಯ’.
ಕಾಶ್ಮೀರ ವಿಜಯದ ಕಲಾಗಡಣ:-
ಯಕ್ಷಗಾನೀಯ ಪದ್ಯಸಿರಿಯಿಂದ ಶ್ರೀಮಂತವಾದ ಕಾಶ್ಮೀರ ವಿಜಯ ಪ್ರಸಂಗವು ಪಟ್ಲ ಸತೀಶ ಶೆಟ್ಟಿ, ತಲಪಾಡಿ ದೇವಿ
ಪ್ರಸಾದ್ ಆಳ್ವ, ಡಾ. ಪ್ರಖ್ಯಾತ್ ಶೆಟ್ಟಿ, ಪದ್ಮನಾಭ ಉಪಾಧ್ಯಾಯ, ರೋಹಿತ್ ಉಚ್ಚಿಲರ ಚಂಡೆ-ಮದ್ದಳೆ, ಹಿರಿಯ
ಅರ್ಥಧಾರಿಗಳಾದ ಪ್ರೊ.ಎಂ.ಎಲ್. ಸಾಮಗ, ಹರೀಶ್ ಬಳಂತಿಮುಗರು, ಪವನ್ ಕಿರಣಕೆರೆ, ಶ್ರೀರಮಣ ಆಚಾರ್ಯ,ಸದಾಶಿವ ಆಳ್ವ, ಮಹೇಂದ್ರ ಆಚಾರ್ಯರ ಒಗ್ಗೂಡುವಿಕೆಯಿಂದ ನಡೆದ ತಾಳಮದ್ದಳೆಗಳು ಜನಮನ್ನಣೆಯನ್ನು ಪಡೆದಿದ್ದು, ಮತ್ತಷ್ಟು ಪಕ್ವ ಕಲಾವಿದರ ಕೂಡುವಿಕೆಯಲ್ಲಿ ರಾಜ್ಯ-ಹೊರರಾಜ್ಯಗಳಲ್ಲಿ ಕಾಶ್ಮೀರ ವಿಜಯದ ತಾಳಮದ್ದಳೆಗಳು ನಿಗದಿಯಾಗಿರುವುದು ಸುಧಾಕರ ಆಚಾರ್ಯರ ಪ್ರಯತ್ನಕ್ಕೆ ಸಂದ ಗೆಲುವಾಗಿದೆ.
ಸದಾ ಪ್ರಯೋಗಶೀಲವಾದ ಯಕ್ಷಗಾನ ರಂಗಭೂಮಿಯಲ್ಲಿ ಕಾಶ್ಮೀರ ವಿಜಯವು ಪ್ರಚೋದನೆ-
ಪ್ರಭಾವಕ್ಕೊಳಗಾಗದೇ ಹೊಸ ಮೈಲಿಗಲ್ಲನ್ನು ಸ್ಥಾಪಿಸಿ, ಯುವ ಮನಸ್ಸುಗಳನ್ನು ಕಲಾವಲಯದತ್ತ ಸೆಳೆಯುವಲ್ಲಿ
ಸಫಲವಾಗಲಿ ಎಂಬುದು ಯಕ್ಷಾಭಿಮಾನಿಗಳ ಸದಾಶಯವಾಗಿದೆ. ಪ್ರೊ. ಪವನ್ ಕಿರಣಕೆರೆ

No Comments

Leave A Comment