Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

“ಎಂಡಿಎಂಎ” ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್‌ಗಳ ಬಂಧನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ಮಾದಕ ವಸ್ತು ‘ಎಂಡಿಎಂಎ’ ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೂಲತಃ ಸಜಿಪ ಮುನ್ನೂರು ಗ್ರಾಮದ ಪ್ರಸ್ತುತ ಉಳ್ಳಾಲದ ಹಫೀಝ್ ಯಾನೆ ಅಪ್ಪಿ(35), ಸಜಿಪ ಮುನ್ನೂರಿನ ಅಮೀರ್ ಯಾನೆ ಅಮ್ಮಿ(34), ಸಜಿಪ ಮುನ್ನೂರಿನ ಜಾಕಿರ್ ಹುಸೇನ್ ಯಾನೆ ತಾಚ್ಚಿ (28) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಉಳ್ಳಾಲ ತಾಲೂಕಿನ ತಲಪಾಡಿ-ದೇವಿಪುರ ರಸ್ತೆಯಲ್ಲಿನ ತಚ್ಚಾಣಿ ಪರಿಸರದಲ್ಲಿ ಕಾರಿನಲ್ಲಿ ಮೂವರು ಮಾದಕ ವಸ್ತುವಾದ ಎಂಡಿಎಂಎಯನ್ನು ಬೆಂಗಳೂರಿನಿಂದ ಖರೀದಿಸಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಬಂಧಿಸಿದರಲ್ಲದೆ ನಿಷೇಧಿತ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರು, 200 ಗ್ರಾಂ ತೂಕದ 10,00,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, 3 ಮೊಬೈಲ್, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 15,70,500 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ಪೈಕಿ ಹಫೀಝ್ ಯಾನೆ ಅಪ್ಪಿ ಎಂಬಾತನ ವಿರುದ್ಧ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಹಾಗೂ ಇತರ 3 ದರೋಡೆ ಪ್ರಕರಣಗಳು, ಬಜ್ಪೆಠಾಣೆಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ, ಪಾಂಡೇಶ್ವರ ಠಾಣೆಯಲ್ಲಿ 2 ಬೈಕ್ ಕಳವು ಪ್ರಕರಣಗಳು, ಉಡುಪಿ ಜಿಲ್ಲೆಯ ಶಿರ್ವಾ ಹಾಗೂ ಪಡುಬಿದ್ರಿ ಠಾಣೆಯಲ್ಲಿ ಕಳವು ಪ್ರಕರಣಗಳ ಸಹಿತ 8 ಪ್ರಕರಣಗಳು ದಾಖಲಾಗಿವೆ.

ಈತನು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಬಿಡುಗಡೆಗೊಂಡಿದ್ದರೂ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೋರ್ವ ಆರೋಪಿ ಜಾಕಿರ್ ಹುಸೇನ್ ಯಾನೆ ತಾಚ್ಚಿ ವಿರುದ್ಧ ಬರ್ಕೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ, ಕದ್ರಿ ಠಾಣೆಯಲ್ಲಿ ಹಲ್ಲೆ, ಬೆದರಿಕೆ ಪ್ರಕರಣ, ಬಂಟ್ವಾಳ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಧರ್ಮಸ್ಥಳ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

No Comments

Leave A Comment