Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಸೌಜನ್ಯ ಪ್ರಕರಣ ಮೇಲ್ಮನವಿ ಸಲ್ಲಿಸುವ ಬಗ್ಗೆ ಪರಿಶೀಲನೆ, ನೈತಿಕ ಪೊಲೀಸ್‌ ಗಿರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಎಂ ಸಿದ್ದರಾಮಯ್ಯ

ಮಂಗಳೂರು: ನೈತಿಕ ಪೊಲೀಸ್ ಗಿರಿ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ಕಾನೂನಿನಲ್ಲಿ ನೈತಿಕ ಪೊಲೀಸ್ ಗಿರಿಗೆ ಅವಕಾಶವಿಲ್ಲ. ಕಾನೂನನ್ನು ಕೈಗೆತ್ತಿಕೊಳ್ಳಬೇಡಿ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಕರಾವಳಿ ಜಿಲ್ಲೆಗಳ ಪ್ರವಾಸ ವೇಳೆ ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೌಜನ್ಯ ಕೇಸ್ ಕೋರ್ಟ್ ನಲ್ಲಿ ಇತ್ಯರ್ಥವಾಗಿದೆ. ಸೌಜನ್ಯ ಕೊಲೆ ಪ್ರಕರಣ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಅದು ಕೋರ್ಟ್ ನಲ್ಲಿ ಇತ್ಯರ್ಥವಾಗಿದೆ. ಸೌಜನ್ಯ ಪೋಷಕರು ಮತ್ತು ಇನ್ನೂ ಕೆಲವರು ಅದರ ಮರುತನಿಖೆಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಕಾನೂನು ಪ್ರಕಾರ ಮುಂದೆ ಏನು ಕ್ರಮ ಕೈಗೊಳ್ಳಬಹುದೆಂದು ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ನಾನು ಮೂಲತಃ ವಕೀಲನಾಗಿ ನನಗೆ ಗೊತ್ತಿರುವ ಕಾನೂನು ಪ್ರಕಾರ ಸೌಜನ್ಯ ಪೋಷಕರು ಹೈಕೋರ್ಟ್ ಗೆ ಮನವಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಕೋರ್ಟ್ ಏನು ತೀರ್ಪು ಕೊಟ್ಟಿದೆ ಎಂದು ನಾನು ಓದಿಲ್ಲ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ. ಕೋರ್ಟ್ ನೀಡಿರುವ ತೀರ್ಪನ್ನು ಆಧರಿಸಿ ಪೋಷಕರು ಮೇಲ್ಮನವಿ ಸಲ್ಲಿಸಬೇಕಾಗುತ್ತದೆ.

 ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ: ಯಾರೇ ಆಗಲಿ ಸಾಮಾಜಿಕ ಜಾಲತಾಣದಲ್ಲಿ ಒಬ್ಬರ ಬಗ್ಗೆ ಸುಳ್ಳು ಸುದ್ದಿ ಹರಡಿದರೆ, ಅನಗತ್ಯ ಆರೋಪಗಳು, ಅಪಪ್ರಚಾರ, ತೇಜೋವಧೆ ಮಾಡಿದರೆ ಅದು ಸರ್ಕಾರ ವಿರುದ್ಧವಾಗಲಿ, ವ್ಯಕ್ತಿಗಳ ವಿರುದ್ಧವಾಗಲಿ ಅಂಥವರ ವಿರುದ್ಧ ಕಠಿಣವಾದ ಕ್ರಮ ತೆಗೆದುಕೊಳ್ಳಲಾಗುವುದು. ಟೀಕೆ ಮಾಡುವುದು, ಸುಳ್ಳು ಸುದ್ದಿ ಹಬ್ಬಿಸುವುದು, ವೈಯಕ್ತಿಕವಾಗಿ ತೇಜೋವಧೆ ಮಾಡುವುದು ಬೇರೆ ಎಂದರು.

ಕೇಂದ್ರ ಸರ್ಕಾರದ ತೀರ್ಮಾನ: ಕಸ್ತೂರಿರಂಗನ್ ವರದಿ ಜಾರಿ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಕರ್ನಾಟಕ ಸರ್ಕಾರ ಬೇಡ ಎಂದು ಹೇಳಿದ್ದೇವೆ. ಪರಿಸರ ರಕ್ಷಣೆ ವಿಚಾರವಾಗಿ ಸರ್ಕಾರ ಹಿಂದೆ ಬೀಳುವುದಿಲ್ಲ ಎಂದರು.
ಬಿಟ್ ಕಾಯಿನ್ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ಹೆಸರು ಹೇಳಿರುವ ವ್ಯಕ್ತಿಗಳಿಗೆ ಇನ್ನೂ ನೊಟೀಸ್ ನೀಡಿಲ್ಲವೇಕೆ ಎಂದು ಕೇಳಿದ್ದಕ್ಕೆ, ಎಸ್ ಐಟಿಯವರೇ ಅವರ ಕ್ರಮ ಕೈಗೊಳ್ಳಬೇಕು.ಎಸ್ ಐಟಿ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದರು.

No Comments

Leave A Comment