Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆ: ಕಳಸ-ಉಡುಪಿ ರಾಷ್ಟ್ರೀಯ ಹೆದ್ದಾರಿ 169 ಬಂದ್, ಭದ್ರಾ ನದಿ ಅಬ್ಬರಕ್ಕೆ ಹೆಬ್ಬಾಳೆ ಸೇತುವೆ ಮುಳುಗಡೆ

ಮಂಗಳೂರು: ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರಿ ಮಳೆ ಮುಂದುವರೆದಿದ್ದು, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಧಾರಾಕಾರ ಮಳೆಯಿಂದಾಗಿ ಮುಂಡ್ಲಿ ಅಣೆಕಟ್ಟು ತುಂಬಿ ಹರಿಯುತ್ತಿದೆ. ಜುಲೈ 23ಕ್ಕೆ ಅಧಿಕಾರಿಗಳು ಆರೆಂಜ್ ಅಲರ್ಟ್ ಘೋಷಿಸಿದ್ದಾರೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ನೆಲ್ಲೀಬಿಡು ಸೇತುವೆ ಮುಳುಗಡೆಯಾಗಿದ್ದು, ಕಳಸದಿಂದ ಉಡುಪಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ಬಂದ್ ಆಗಿದೆ. ಕಳಸ ದಿಂದ ಕುದುರೆಮುಖ ಮಾರ್ಗವಾಗಿ ಉಡುಪಿ ಜಿಲ್ಲೆಗೆ ಸಂಪರ್ಕಿಸುವ ಸೇತುವೆ ಕೂಡ ಬಂದ್ ಆಗಿದೆ. ಹೀಗಾಗಿ ವಾಹನ ಸವಾರರು ಪರದಾಡುತ್ತಿದೆ.

ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಘಟ್ಟ ಪ್ರದೇಶದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರ್ತಿದೆ. ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು ನದಿ ಬದಿಗೆ ಹೋಗದಂತೆ ದೇವಾಲಯದ ಭಕ್ತರಿಗೆ ಸೂಚನೆ ನೀಡಲಾಗಿದೆ.

ಭೋರ್ಗರೆದು ಹರಿಯುತ್ತಿದೆ ನೇತ್ರಾವತಿ ನದಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನಲೆ ಧರ್ಮಸ್ಥಳದ ನೇತ್ರಾವತಿ ನದಿ ಭೋರ್ಗರೆದು ಹರಿಯುತ್ತಿದ್ದು, ನದಿ ನೀರಿನ ಮಟ್ಟ ಏರಿಕೆ ಹಿನ್ನಲೆ ನೇತ್ರಾವತಿ ಸ್ನಾನ ಘಟ್ಟ ಮುಳುಗಡೆಯ ಭೀತಿ ಎದುರಾಗಿದೆ. ಅಪಾಯದ ಹಿನ್ನಲೆ ನದಿಗಿಳಿಯದಂತೆ ಭಕ್ತರಿಗೆ ಎಚ್ಚರಿಕೆ ನೀಡಲಾಗಿದೆ. ಆದರೆ ಯಾತ್ರಿಗಳು ಎಚ್ಚರಿಕೆಯನ್ನೂ ಲೆಕ್ಕಿಸದೆ ನದಿಗಿಳಿಯುತ್ತಿದ್ದಾರೆ.  ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಬೆಳಗಾವಿ ಜಿಲ್ಲೆ ಖಾನಾಪುರದ ಕಣಕುಂಬಿಯಲ್ಲಿ ದಾಖಲೆ ಮಳೆಯಾಗಿದೆ.

ನಿತ್ಯ 200-235 ಮಿ‌ಲಿ ಮೀಟರ್ ಮಳೆ ಪ್ರಮಾಣ ದಾಖಲಾಗಿದೆ. ಕಳಸಾ ಮತ್ತು ಬಂಡೂರಿ ನಾಲಾ ತುಂಬಿ ಹರಿಯುತ್ತಿದೆ. ಕಳಸಾ ನಾಲಾ ಕಾಮಗಾರಿ ಅಪೂರ್ಣ ಹಿನ್ನೆಲೆಯಲ್ಲಿ ರಾಜ್ಯದ ಮಲಪ್ರಭಾ ನದಿ ಸೇರಬೇಕಿದ್ದ ಅಪಾರ ನೀರು ವ್ಯರ್ಥವಾಗಿದೆ. ನದಿ ಸೇರಬೇಕಿದ್ದ ನೀರು ಗೋವಾ ಮೂಲಕ ಸಮುದ್ರ ಸೇರಿ ವ್ಯರ್ಥವಾಗಿದೆ. ಅಪೂರ್ಣಗೊಂಡ ಕಾಮಗಾರಿ ಜಾಗದಲ್ಲೇ ನೀರು ಧುಮ್ಮಿಕ್ಕುತ್ತಿದೆ.

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದ್ದು, ನಿರಂತರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಭೂಕುಸಿತ ಉಂಟಾಗಿದೆ. ನಿರ್ಮಾಣ ಹಂತದ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಕುಸಿಯುತ್ತಿದ್ದು, ಹೆದ್ದಾರಿ ಅಕ್ಕಪಕ್ಕದ ಪ್ರದೇಶದಲ್ಲಿ ಭೂಕುಸಿತದಿಂದ ಆತಂಕ ಹೆಚ್ಚಿದೆ. ದೋಣಿಗಲ್ ಸಮೀಪದ ದರ್ಗಾಬಳಿ‌ ರಸ್ತೆ ಕುಸಿಯುತ್ತಿದೆ.

ಮತ್ತಷ್ಟು ಮಳೆ ಹೆಚ್ಚಾದರೆ ರಸ್ತೆ ಸಂಚಾರ ಬಂದ್ ಆಗುವ ಆತಂಕವಿದೆ. ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಿಂದ ಪ್ರವಾಹದ ಮಟ್ಟ ಮೀರಿ ನದಿಗಳು ಹರಿಯುತ್ತಿವೆ. ಭದ್ರಾ ನದಿ ಅಬ್ಬರಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಹೇಮಾವತಿ, ತುಂಗಾ ಭದ್ರಾ ನದಿಗಳಲ್ಲೂ ಒಳಹರಿವು ಹೆಚ್ಚಳವಾಗಿದೆ.

No Comments

Leave A Comment