ಪ್ರಜಾಪ್ರಭುತ್ವ-ಸಂವಿಧಾನ ಹಕ್ಕುಗಳ ರಕ್ಷಣೆಗೆ, ತನಿಖಾ ಸಂಸ್ಥೆಗಳ ಸ್ವಾತಂತ್ರ್ಯಕ್ಕೆ ನಾವೆಲ್ಲರೂ ಒಗ್ಗೂಡುತ್ತಿದ್ದೇವೆ: ವಿಪಕ್ಷ ನಾಯಕರ ಸಭೆಯ ಮುನ್ನ ಕಾಂಗ್ರೆಸ್ ನಾಯಕರ ಹೇಳಿಕೆ
ಬೆಂಗಳೂರು: ಲೋಕಸಭೆ ಚುನಾವಣೆ 2024ಕ್ಕೆ ಮುನ್ನುಡಿಯಾಗಿ ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಬಿರುಸಿನ ರಾಜಕೀಯ ಚಟುವಟಿಕೆಯ ತಾಣವಾಗುತ್ತಿದೆ. ದೇಶದ ಘಟಾನುಘಟಿ ರಾಜಕೀಯ ನಾಯಕರು ರಾಜಧಾನಿಗೆ ಆಗಮಿಸುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟವನ್ನು ಕಟ್ಟಿಹಾಕುವುದು ಈ ನಾಯಕರ ಸಭೆಯ ಉದ್ದೇಶವಾಗಿದೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಿ ಲೋಕಸಭೆ ಚುನಾವಣೆಯನ್ನು ಗೆಲ್ಲಲು ತಂತ್ರ ರೂಪಿಸಲು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಜಾರಿಗೆ ತರುವುದು, ಸಹಮತಕ್ಕೆ ಬಂದು ಲೋಕಸಭೆ ಸ್ಥಾನಗಳಿಗೆ ಸ್ಪರ್ಧಿಸಲು ಸೀಟು ಹಂಚಿಕೆ, ವಿಪಕ್ಷಗಳಲ್ಲಿ ನಾಯಕನ ಆಯ್ಕೆ ಇತ್ಯಾದಿಗಳಿಗೆ ಸಹಮತಕ್ಕೆ ಬರಲು ಇನ್ನೂ ಹಲವಾರು ಸುತ್ತಿನ ಮಾತುಕತೆಗಳು ನಡೆಯಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಇಂದು ವಿರೋಧ ಪಕ್ಷದ ನಾಯಕರಿಗೆ ಆಯೋಜಿಸಿರುವ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ.
ಎಂಡಿಎಂಕೆ, ಕೆಡಿಎಂಕೆ, ವಿಸಿಕೆ, ಆರ್ಎಸ್ಪಿ, ಫಾರ್ವರ್ಡ್ ಬ್ಲಾಕ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ಕೇರಳ ಕಾಂಗ್ರೆಸ್ (ಜೋಸೆಫ್) ಮತ್ತು ಕೇರಳ ಕಾಂಗ್ರೆಸ್ (ಮಣಿ) ಜೂನ್ 23 ರ ಸಭೆಯ ಭಾಗವಾಗದ ಹೊಸ ಆಹ್ವಾನಿತರು ಎಂದು ಮೂಲಗಳು ತಿಳಿಸಿವೆ. ಒಟ್ಟಾರೆಯಾಗಿ, ಒಟ್ಟಾರೆಯಾಗಿ 24ರಿಂದ 26 ವಿರೋಧ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.