ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

‘3 ದಿನದಿಂದ ಮಳೆಯಿಲ್ಲ.. ಆದರೂ ಪ್ರವಾಹ’; ಮೆಟ್ರೋಗೆ ಸ್ಪೀಡ್ ಲಿಮಿಟ್, ಕುಡಿಯುವ ನೀರಿಗೂ ಹಾಹಾಕಾರ, ಅಗತ್ಯ ವಸ್ತುಗಳ ಟ್ರಕ್‌ಗಳಿಗೆ ಮಾತ್ರ ದೆಹಲಿಯಲ್ಲಿ ಅವಕಾಶ!!

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಅಕ್ಷರಶಃ ಪ್ರವಾಹಕ್ಕೆ ಸಿಲುಕಿದ್ದು, ಕಳೆದ ಮೂರು ದಿನದಿಂದ ದೆಹಲಿಯಲ್ಲಿ ಮಳೆಯಾಗಿಲ್ಲ.. ಆದರೂ ದೆಹಲಿಯಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದ್ದು, ದೆಹಲಿ ಮೆಟ್ರೋಗೆ ಸ್ಪೀಡ್ ಲಿಮಿಟ್ ಹೇರಲಾಗಿದ್ದು, ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಅಗತ್ಯ ವಸ್ತುಗಳ ಟ್ರಕ್‌ಗಳಿಗೆ ಮಾತ್ರ ದೆಹಲಿಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಉಕ್ಕಿ ಹರಿಯುತ್ತಿರುವ ಯಮುನಾ ನದಿ ಹರಿವು ಗುರುವಾರ ಬೆಳಗ್ಗೆ ಗರಿಷ್ಠ ಮಟ್ಟಕ್ಕೆ ಏರಿದ್ದು, ತೀರ ಸಮೀಪದ ಪ್ರದೇಶಗಳಲ್ಲಿನ ರಸ್ತೆಗಳು, ಸಾರ್ವಜನಿಕ ಹಾಗೂ ಖಾಸಗಿ ಮೂಲಸೌಕರ್ಯಗಳು ಜಲಾವೃತಗೊಂಡಿವೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಿನ ಪ್ರಮಾಣ ಹಳೇ ರೈಲು ಸೇತುವೆ ಬಳಿ ಬುಧವಾರ ರಾತ್ರಿ 208 ಮೀಟರ್‌ಗೆ ತಲುಪಿತ್ತು. ಆ ಪ್ರಮಾಣ ಇಂದು ಬೆಳಗ್ಗೆ 8ರ ಹೊತ್ತಿಗೆ 208.48 ಮೀಟರ್‌ಗೆ ಏರಿದೆ. ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ‘ಇದು ಮಿತಿ ಮೀರಿದ ಪರಿಸ್ಥಿತಿ’ ಎನ್ನಲಾಗಿದೆ.

ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು, ಪರಿಸ್ಥಿತಿ ನಿಯಂತ್ರಣ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಬುಧವಾರ ಆಗ್ರಹಿಸಿದ್ದು, ಜನರು ಕಾನೂನುಬಾಹಿರವಾಗಿ ಗುಂಪುಗೂಡುವುದನ್ನು ತಡೆಯಲು ನಗರ ಪೊಲೀಸರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಸೆಕ್ಷನ್‌ 144 (ನಿಷೇಧಾಜ್ಞೆ) ಜಾರಿಗೊಳಿಸಬೇಕು ಎಂದಿದ್ದಾರೆ. ಅಲ್ಲದೆ ‘ದೆಹಲಿಯಲ್ಲಿ ಎರಡು ದಿನದಿಂದ ಮಳೆಯಾಗಿಲ್ಲ. ಹರಿಯಾಣದ ಹಥಿನೀಕುಂಡ್‌ ಬ್ಯಾರೇಜ್‌ನಿಂದ ಅಸಹಜವಾಗಿ ಹೆಚ್ಚು ನೀರನ್ನು ಬಿಡುಗಡೆ ಮಾಡುತ್ತಿರುವುದರಿಂದ ಯಮುನಾ ನದಿಯ ಮಟ್ಟ ಹೆಚ್ಚಿದೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ನೀರಿನ ಮಟ್ಟ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿರುವ ಕೇಜ್ರಿವಾಲ್, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೂ ಈ ಸಂಬಂಧ ಪತ್ರ ಬರೆದಿದ್ದು, ಕೆಲವೇ ವಾರಗಳಲ್ಲಿ ದೆಹಲಿಯಲ್ಲಿ ಜಿ20 ಸಮ್ಮೇಳನ ನಡೆಯಲಿದೆ ಎಂಬುದನ್ನು ಉಲ್ಲೇಖಿಸಿರುವ ಅವರು, ಹರಿಯಾಣದ ಹಥಿನೀಕುಂಡ್‌ ಬ್ಯಾರೇಜ್‌ನಿಂದ ನಿಧಾನವಾಗಿ ನೀರು ಹರಿಸುವಂತೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಗತ್ಯ ವಸ್ತುಗಳ ಟ್ರಕ್‌ಗಳಿಗೆ ಮಾತ್ರ ಅವಕಾಶ
ಯಮುನಾ ನದಿ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಿಂಘು ಗಡಿ ಸೇರಿದಂತೆ ನಾಲ್ಕು ಗಡಿಗಳಿಂದ ನಗರಕ್ಕೆ ಆಗಮಿಸುವ ಅಗತ್ಯ ವಸ್ತುಗಳನ್ನು ಸಾಗಿಸುವ ಟ್ರಕ್ ಮತ್ತು ವಾಹನಗಳನ್ನು ಹೊರತುಪಡಿಸಿ ಭಾರೀ ಸರಕು ವಾಹನಗಳ ಪ್ರವೇಶವನ್ನು ದೆಹಲಿ ಸರ್ಕಾರ ನಿಷೇಧಿಸಿದೆಎಂದು ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಗುರುವಾರ ತಿಳಿಸಿದ್ದಾರೆ. ಸಾರಿಗೆ ಇಲಾಖೆ ಹೊರಡಿಸಿರುವ ಆದೇಶದ ಪ್ರತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ಯಮುನಾ ನದಿಯ ನೀರಿನ ಮಟ್ಟ ಅಸಹಜವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಿಂಘು ಬಾರ್ಡರ್, ಬಾದರ್‌ಪುರ ಬಾರ್ಡರ್, ಲೋನಿ ಬಾರ್ಡರ್ ಮತ್ತು ಚಿಲ್ಲಾ ಬಾರ್ಡರ್‌ನಿಂದ ಭಾರೀ ಸರಕುಗಳ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಹರಿಯಾಣ, ಹಿಮಾಚಲ ಪ್ರದೇಶ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡದಿಂದ ಬರುವ ಅಂತಾರಾಜ್ಯ ಬಸ್‌ಗಳು ಐಎಸ್‌ಬಿಟಿ ಕಾಶ್ಮೇರಿ ಗೇಟ್‌ಗೆ ಹೋಗುವ ಬದಲು ಸಿಂಗು ಗಡಿಯಲ್ಲಿ ನಿಲ್ಲುತ್ತವೆ ಎಂದು ಗಹ್ಲೋಟ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಆಹಾರ ಮತ್ತು ಪೆಟ್ರೋಲಿಯಂ ಉತ್ಪನ್ನಗಳಂತಹ ಅಗತ್ಯ ಸೇವೆಗಳನ್ನು ಸಾಗಿಸುವ ವಾಹನಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಾನುವಾರದವರೆಗೆ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ರಜೆ
ಪ್ರವಾಹದ ಹಿನ್ನಲೆಯಲ್ಲಿ ದೆಹಲಿಯಲ್ಲಿ ಭಾನುವಾರದವರೆಗೆ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಿಎಂ ಅರವಿಂದ್ ಕೇಜ್ರಿವಾಲ್, “ನಾವು ಡಿಡಿಎಂಎ ಸಭೆ ನಡೆಸಿದ್ದೇವೆ. ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಭಾನುವಾರದವರೆಗೆ ಮುಚ್ಚಲ್ಪಡುತ್ತವೆ ಎಂದು ಹೇಳಿದ್ದಾರೆ.

ಸರ್ಕಾರಿ ನೌಕರರಿಗೂ ವರ್ಕ್ ಫ್ರಂ ಹೋಮ್
ಇನ್ನು ಅಗತ್ಯ ಸೇವೆಗಳನ್ನು ಒದಗಿಸುವ ಹೊರತುಪಡಿಸಿ ಎಲ್ಲಾ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತವೆ ಎಂದು ಹೇಳಿರುವ ಕೇಜ್ರಿವಾಲ್ ಮನೆಯಿಂದ ಕೆಲಸ ಮಾಡಲು ಖಾಸಗಿ ಕಚೇರಿಗಳಿಗೂ ಸಲಹೆ ನೀಡಲಾಗುತ್ತಿದೆ. ಯಮುನಾ ಮಟ್ಟವು ದಾಖಲೆಯ ಮಟ್ಟಕ್ಕೆ ಏರುವುದರೊಂದಿಗೆ, ದೆಹಲಿಯ ಸೆಕ್ರೆಟರಿಯೇಟ್ ವಸತಿ ಸೇರಿದಂತೆ ಹಲವಾರು ಪ್ರಮುಖ ಪ್ರದೇಶಗಳು ಗುರುವಾರ ಜಲಾವೃತವಾಗಿದೆ ಎಂದು ಹೇಳಿದ್ದಾರೆ.

ದೆಹಲಿ ಮೆಟ್ರೋ ರೈಲುಗಳಿಗೆ ವೇಗ ಮಿತಿ
ಇನ್ನು ಪ್ರವಾಹದ ಹಿನ್ನಲೆಯಲ್ಲಿ ಯಮುನಾ ನದಿ ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿ ಮೆಟ್ರೋ ರೈಲುಗಳಿಗೆ ವೇಗ ಮಿತಿ ಹೇರಲಾಗಿದೆ. ನಾಲ್ಕು ಯಮುನಾ ಸೇತುವೆಗಳನ್ನು ದಾಟುವ ಮೆಟ್ರೋ ರೈಲುಗಳು ಗಂಟೆಗೆ 30 ಕಿಮೀ ವೇಗದಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ ಎಂದು ಡಿಎಂಆರ್‌ಸಿ ಗುರುವಾರ ತಿಳಿಸಿದೆ. “ಯಮುನಾ ನದಿಯ ಹೆಚ್ಚುತ್ತಿರುವ ನೀರಿನ ಮಟ್ಟದಿಂದಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ನದಿಯ ಮೇಲಿನ ಎಲ್ಲಾ ನಾಲ್ಕು ಮೆಟ್ರೋ ಸೇತುವೆಗಳ ಮೂಲಕ ರೈಲುಗಳು 30 ಕಿಲೋಮೀಟರ್ ವೇಗದಲ್ಲಿ ಹಾದುಹೋಗುತ್ತಿವೆ” ಎಂದು ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಟ್ವೀಟ್ ಮಾಡಿದೆ.

ಯಮುನಾ ನದಿಯ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಮುನಾ ನದಿಯ ಮೇಲಿನ ಮೆಟ್ರೋ ಸೇತುವೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಏತನ್ಮಧ್ಯೆ, ಯಮುನಾ ನದಿಯ ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣ ನೀಲಿ ಮಾರ್ಗದ ಯಮುನಾ ಬ್ಯಾಂಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಡಿಎಂಆರ್‌ಸಿ ಅಧಿಕಾರಿಗಳು ಬುಧವಾರ ಪಿಟಿಐಗೆ ತಿಳಿಸಿದ್ದಾರೆ.

ಯಮುನಾ ನದಿಯ ಹೆಚ್ಚುತ್ತಿರುವ ನೀರಿನ ಮಟ್ಟದಿಂದಾಗಿ, ಯಮುನಾ ಬ್ಯಾಂಕ್ ಮೆಟ್ರೋ ನಿಲ್ದಾಣಕ್ಕೆ ಹೋಗುವ ಮಾರ್ಗವು ಪ್ರಸ್ತುತ ಪ್ರವೇಶಿಸಲಾಗುವುದಿಲ್ಲ. ದಯವಿಟ್ಟು ನಿಮ್ಮ ಪ್ರಯಾಣವನ್ನು ಯೋಜಿಸಿ ಮತ್ತು ಪರ್ಯಾಯ ಮಾರ್ಗಗಳನ್ನು ಪರಿಗಣಿಸಿ. ಆದಾಗ್ಯೂ, ಇಂಟರ್ಚೇಂಜ್ ಸೌಲಭ್ಯ ಲಭ್ಯವಿದೆ ಎಂದು DMRC ಟ್ವೀಟ್ ಮಾಡಿದೆ.

ದೆಹಲಿಯಲ್ಲಿ ಯಮುನಾ ನದಿ 1978 ರ ಸಾರ್ವಕಾಲಿಕ ದಾಖಲೆಯನ್ನು ಮೀರಿ ಅಪಾಯದ ಹಂತವನ್ನು ದಾಟಿದೆ, ದಡದ ಸಮೀಪವಿರುವ ತಗ್ಗು ಪ್ರದೇಶಗಳನ್ನು ಜಲಾವೃತಗೊಳಿಸಿದೆ. ಗುರುವಾರ ಬೆಳಗ್ಗೆ 10 ಗಂಟೆಗೆ ಯಮುನಾದಲ್ಲಿ ನೀರಿನ ಮಟ್ಟ 208.53 ಮೀಟರ್‌ಗಳಷ್ಟಿತ್ತು.

ಇದನ್ನೂ ಓದಿ: ದೆಹಲಿಯಲ್ಲಿ ಮತ್ತೊಂದು ಬರ್ಬರ ಕೊಲೆ: ಯುವತಿಯ ತುಂಡು-ತುಂಡಾದ ದೇಹ ಪತ್ತೆ

ದೆಹಲಿಯಲ್ಲಿ ಕುಡಿಯುವ ನೀರಿಗೆ ಹೊಡೆತ
ಯಮುನಾ ನದಿಯ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಜೀರಾಬಾದ್, ಚಂದ್ರವಾಲ್ ಮತ್ತು ಓಖ್ಲಾದಲ್ಲಿನ ಸಂಸ್ಕರಣಾ ಘಟಕಗಳನ್ನು ಮುಚ್ಚುವುದರಿಂದ ನಗರದ ಕೆಲವು ಭಾಗಗಳಲ್ಲಿ ನೀರು ಪೂರೈಕೆಯ ಮೇಲೆ ಪರಿಣಾಮ ಬೀರಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ.

ಯಮುನಾ ನೀರಿನ ಮಟ್ಟ ಏರಿಕೆಯಿಂದಾಗಿ ವಜೀರಾಬಾದ್, ಚಂದ್ರವಾಲ್ ಮತ್ತು ಓಖ್ಲಾದಲ್ಲಿನ ನೀರು ಸಂಸ್ಕರಣಾ ಘಟಕಗಳನ್ನು ಮುಚ್ಚಲಾಗುತ್ತಿದೆ. ಇದರಿಂದಾಗಿ ಕೆಲವು ಪ್ರದೇಶಗಳಲ್ಲಿ ನೀರಿನ ಪೂರೈಕೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಯಮುನಾ ನೀರು ಕಡಿಮೆಯಾದ ತಕ್ಷಣ ಈ ಘಟಕಗಳು ಕಾರ್ಯಾರಂಭ ಮಾಡುತ್ತವೆ”ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

No Comments

Leave A Comment