Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಚಿಕ್ಕೋಡಿ: ನಾಪತ್ತೆಯಾಗಿದ್ದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ

ಚಿಕ್ಕೋಡಿ: ಹಿರೇಕೋಡಿ ಗ್ರಾಮದಿಂದ ನಾಪತ್ತೆಯಾಗಿದ್ದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಯಾಗಿರುವುದು ಇದೀಗ ಬಹಿರಂಗಗೊಂಡಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಎರಡು ದಿನಗಳಿಂದ ನಾಪತ್ತೆಯಾಗಿದ್ದರು.

ಜುಲೈ 6ರಿಂದ ನಂದಿಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನಮುನಿಗಾಗಿ ಜುಲೈ 6ರಂದು ಇಡೀ ದಿನ ಆಶ್ರಮದ ಸುತ್ತಮುತ್ತ ಭಕ್ತರು ಶೋಧ ನಡೆಸಿದ್ದರು. ಬಳಿಕ ನಿನ್ನೆ ಚಿಕ್ಕೋಡಿ ಪೊಲೀಸ್ ಠಾಣೆಗೆ ಜೈನಮುನಿಗಳು ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು‌ ತನಿಖೆ ಕೈಗೊಂಡಿದ್ದ ಚಿಕ್ಕೋಡಿ ಪೊಲೀಸರು, ಅನುಮಾನದ ಮೇಲೆ ಇಬ್ಬರನ್ನು ವಶಕ್ಕೆ ಪಡೆದಿದ್ದರು. ತನಿಖೆಯ ವೇಳೆ ಜೈನಮುನಿಯ ಹತ್ಯೆಯಾಗಿರುವುದು ಬಯಲಾಗಿದೆ.

ತನಿಖೆ ಸಂದರ್ಭದಲ್ಲಿ ರಾತ್ರಿಯಿಡೀ ಇಬ್ಬರು ಆರೋಪಿಗಳು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದರು. ಹತ್ಯೆ ಮಾಡಿ ಶವ ಎಲ್ಲಿ ಬಿಸಾಕಿದ್ದೇವೆ ಎಂದು ಸ್ಪಷ್ಟ ಮಾಹಿತಿ ನೀಡದೇ ಸತಾಯಿಸಿದ್ದರು.

ಒಂದು ಬಾರಿ ಕೊಲೆ ಮಾಡಿ ಮೃತದೇಹ ಕತ್ತರಿಸಿ ಕಟಕಬಾವಿ ಗ್ರಾಮದಲ್ಲಿ ತೆರೆದ ಕೊಳವೆಬಾವಿಯಲ್ಲಿ ಎಸೆದಿದ್ದೇವೆ ಎಂದಿದ್ದರು. ಮತ್ತೊಂದು ಬಾರಿ ಮೃತದೇಹ ಬಟ್ಟೆಯಲ್ಲಿ ಸುತ್ತಿ ನದಿಗೆ ಎಸೆದಿದ್ದೇವೆ ಎಂದಿದ್ದರು. ಕಟಕಬಾವಿ ಗ್ರಾಮದಲ್ಲಿ ರಾತ್ರಿಯಿಡೀ ಪರಿಶೀಲನೆ ನಡೆಸಿದ ಪೊಲೀಸರಿಗೆ ಶವ ದೊರೆತಿಲ್ಲ. ಇಂದು ಬೆಳಗ್ಗೆ 6.30ರಿಂದ ಮುನಿಗಳ ಮೃತದೇಹದ ಶೋಧಕಾರ್ಯ ಮತ್ತೆ ನಡೆಯಲಿದೆ ಎಂದು ತಿಳಿದುಬಂದಿದೆ.

ಸಾಲ ಮರುಪಾವತಿಸುವಂತೆ ಕೇಳಿದ್ದಕ್ಕೆ ಹತ್ಯೆ
ಸಾಲ ಮರುಪಾವತಿ ಮಾಡುವಂತೆ ಕೇಳಿದ ಕಾರಣಕ್ಕೆ ಆರೋಪಿಗಳು ಜೈನಮುನಿಗಳನ್ನು ಹತ್ಯೆ ಮಾಡಿದ್ದಾರೆಂಬ ವಿಚಾರ ಪ್ರಾಥಮಿಕ ತನಿಖಾ ವರದಿಗಳಿಂದ ತಿಳಿದುಬಂದಿದೆ.

ಆರೋಪಿಗಳಲ್ಲಿ ಒಬ್ಬ ಖಟಕಭಾವಿ ಗ್ರಾಮದವನಾಗಿದ್ದು, ಜೈನಮುನಿಗಳ ಭಕ್ತನಾಗಿದ್ದ. ಅಲ್ಲದೆ, ಅವರೊಂದಿಗೆ ಉತ್ತಮ ಬಾಂಧವ್ಯವನ್ನೂ ಹೊಂದಿದ್ದ. ಹೀಗಾಗಿ ಮುನಿಗಳಿಂದ ಆರೋಪಿ ಲಕ್ಷಾಂತ ರುಪಾಯಿಗಳ ಸಾಲ ಪಡೆದುಕೊಂಡಿದ್ದ.

ಇದರಂತೆ ಮುನಿಗಳು ಸಾಲ ಮರುಪಾವತಿ ಮಾಡುವಂತೆ ಕೇಳಿದ್ದು, ಇದರಿಂದ ಕುಪಿತಗೊಂಡ ಆರೋಪಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಸೇರಿ ಹತ್ಯೆಗೆ ಸಂಚು ರೂಪಿಸಿದ್ದಾನೆ.

ಬಳಿಕ ಆಶ್ರಮದ ಆವರಣದಲ್ಲಿಯೇ ಮುನಿಗಳನ್ನು ಇಬ್ಬರೂ ಹತ್ಯೆ ಮಾಡಿದ್ದು, ಅಲ್ಲಿಂದ ಮೃತದೇಹವನ್ನು ವಿಲೇವಾರಿ ಮಾಡಿದ್ದಾರೆಂದು ವರದಿಗಳು ತಿಳಿಸಿವೆ.

ಈ ನಡುವೆ ಜೈನಮುನಿಗಳು ನಾಪತ್ತೆಯಾದ ಬಳಿಕ ಜೈನ ಬಸದಿಗೆ ಸಂಬಂಧಿಸಿದ ಆಸ್ತಿ ದಾಖಲೆಗಳು ಕೂಡ ಲೆಕ್ಕಕ್ಕೆ ಸಿಗುತ್ತಿಲ್ಲ ಎಂದು ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.

ಜೈನಮುನಿಗಳ ಹತ್ಯೆ ವಿಚಾರ ತಿಳಿಯುತ್ತಿದ್ದಂತೆಯೇ ಇದೀಗ ಆಶ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದು, ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸುತ್ತಿದ್ದಾರೆ.

ಜೈನಮುನಿಗಳು ಎಲ್ಲರೊಂದಿಗೂ ಸೌಹಾರ್ದಯುತರಾಗಿದ್ದರು. ಯಾರೊಂದಿಗೂ ವೈಮನಸ್ಸು ಹೊಂದಿರಲಿಲ್ಲ. ಬಡವರಿಗೆ ಎಂದಿಗೂ ಸಹಾಯ ಮಾಡುತ್ತಿದ್ದರು ಎಂದು ಭಕ್ತೆ ಸುನೀತಾ ಎಂಬುವವರು ಹೇಳಿದ್ದಾರೆ.

No Comments

Leave A Comment