ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ವಿಧಾನಸಭೆ ಉಪಸಭಾಧ್ಯಕ್ಷರಾಗಿ ರುದ್ರಪ್ಪ ಲಮಾಣಿ ಅವಿರೋಧವಾಗಿ ಆಯ್ಕೆ
ಬೆಂಗಳೂರು: ವಿಧಾನಸಭೆಯ 25ನೇ ಉಪಸಭಾಧ್ಯಕ್ಷರಾಗಿ ರುದ್ರಪ್ಪ ಮಾನಪ್ಪ ಲಮಾಣಿ, ಗುರುವಾರ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು. ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ಅವಧಿಯ ನಂತರ ನಡೆದ ಉಪಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ರುದ್ರಪ್ಪ ಲಮಾಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಪ್ರಕಟಿಸಿದರು.
ಸರಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರು ಉಪಸಭಾಧ್ಯಕ್ಷ ಸ್ಥಾನಕ್ಕೆ ರುದ್ರಪ್ಪ ಲಮಾಣಿ ಅವರ ಹೆಸರನ್ನು ಸೂಚಿಸಿದರು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಖಂಡೇರಾಯನಹಳ್ಳಿಯ ರುದ್ರಪ್ಪ ಮಾನಪ್ಪ ಲಮಾಣಿ ಮೂರು ಬಾರಿ ಶಾಸಕರಾಗಿ ಮತ್ತು ಸಚಿವರಾಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಆಯ್ಕೆಯಾದ ರುದ್ರಪ್ಪ ಲಮಾಣಿ ಅವರ ಬಳಿ ತೆರಳಿ ಉಪಸಭಾಧ್ಯಕ್ಷರ ಸ್ಥಾನಕ್ಕೆ ಕರೆದುಕೊಂಡು ಬಂದರು.
ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್, 1999ರಿಂದ ವಿಧಾನಸಭೆಗೆ ಬಂದಿರುವ ರುದ್ರಪ್ಪ ಮಾನಪ್ಪ ಲಮಾಣಿ, ಮಂತ್ರಿಗಿರಿ ಸೇರಿದಂತೆ ಪಕ್ಷದ ಅನೇಕ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ ಮತ್ತು ಎಲ್ಲರಿಂದ ಅಜಾತಶತ್ರು ಎಂದು ಹೆಸರುಗಳಿಸಿಕೊಂಡಿದ್ದಾರೆ. ಇವರ ಅವಧಿಯಲ್ಲಿ ಎಲ್ಲರಿಗೂ ನ್ಯಾಯ ಸಿಗಲಿ. ಹೊಸ ಹೊಸ ನಾಯಕರನ್ನು ತಯಾರು ಮಾಡಲಿ. ಈ ದೊಡ್ಡ ಸ್ಥಾನವನ್ನು ಸಮರ್ಪಕವಾಗಿ ನಿರ್ವಹಿಸುವುದರ ಮೂಲಕ ಎಲ್ಲರ ಹೃದಯವನ್ನು ಗೆಲ್ಲಲಿ ಎಂದು ಶುಭಹಾರೈಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ವಿಧಾನಸಭೆಯ ಉಪಸಭಾಧ್ಯಕ್ಷ ಸ್ಥಾನ ಅತ್ಯಂತ ಗೌರವಯುತವಾದ ಸ್ಥಾನ. ತಮ್ಮ ಅವಧಿಯಲ್ಲಿ ನ್ಯಾಯ ಎಲ್ಲರಿಗೂ ಸಿಗಲಿ. ತಮಗೆ ಇನ್ನಷ್ಟು ಉನ್ನತ ಸ್ಥಾನಗಳು ಸಿಗಲಿ ಎಂದರು.
ಹಿರಿಯ ಶಾಸಕ ಹಾಗೂ ಸರಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಸೇರಿದಂತೆ ಅನೇಕ ಶಾಸಕರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರುದ್ರಪ್ಪ ಲಮಾಣಿ, ಇಲ್ಲಿ ಬರುತ್ತೇನೆ ಅಂದುಕೊಂಡಿರಲಿಲ್ಲ. ಸಚಿವರಾಗಿ ಕೆಲಸ ಮಾಡಬೇಕು ಎನ್ನುವ ಆಸೆ ಇತ್ತು. ಪಕ್ಷದ ನಿರ್ದೇಶನದ ಅನುಸಾರ ಮತ್ತು ಸದನದ ಎಲ್ಲ ಸದಸ್ಯರು ಪ್ರೀತಿಯಿಂದ ಅವಿರೋಧವಾಗಿ ಉಪಸಭಾಧ್ಯಕ್ಷರಾಗಿ ಆಯ್ಕೆ ಮಾಡಿರುವುದಕ್ಕೆ ಅಭಾರಿ ಎಂದರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉಪಸಭಾಧ್ಯಕ್ಷ ಸ್ಥಾನಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.