ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
ಉಡುಪಿ ಜಿಲ್ಲಾದ್ಯಂತ ವ್ಯಾಪಕ ಮಳೆ; ಸಂತ್ರಸ್ತ ಕುಟುಂಬಗಳ ಸ್ಥಳಾಂತರ
ಉಡುಪಿ: ಜಿಲ್ಲೆಯಾದ್ಯಂತ ಗುರುವಾರವೂ ಧಾರಾಕಾರ ಮಳೆ ಸುರಿಯುತ್ತಿದೆ.ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ.
ವಿವಿಧೆಡೆಗಳಲ್ಲಿ ನೀರು ತುಂಬಿದ್ದು, ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸಲಾಗಿದೆ. ಆ ಕಾರ್ಯಕ್ಕೆ ಕೆಲವೆಡೆಗಳಲ್ಲಿ ಬೋಟುಗಳನ್ನು ಬಳಸಲಾಗಿದೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮರವಂತೆ, ಉದ್ಯಾವರ, ಪಡುಕರೆ, ಕಾಪು ಮೊದಲಾದೆಡೆಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ.
ಮಳೆಯೊಂದಿಗೆ ವೇಗದ ಗಾಳಿ ಬೀಸುವ ಪರಿಣಾಮ ಅನೇಕ ಮನೆಗಳು ಹಾಗೂ ಕೃಷಿ ತೋಟಗಳಿಗೆ ಹಾನಿ ಸಂಭವಿಸಿದೆ.
ವಿದ್ಯುತ್ ಸರಬರಾಜಿನಲ್ಲಿಯೂ ವ್ಯತ್ಯಯ ಉಂಟಾಗಿದೆ.
ಉಡುಪಿ ನಗರ ಸೇರಿದಂತೆ ವಿವಿಧೆಡೆಗಳ ಬಹುತೇಕ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಕೃತಕ ನೆರೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಅನೇಕ ಕುಟುಂಬಗಳನ್ನು ಸ್ಥಳಾಂತರಿಸುವ ಕಾರ್ಯವೂ ನಡೆದಿದೆ.
ಉಡುಪಿ ಕೃಷ್ಣಮಠ ಪಾರ್ಕಿಂಗ್ ಪ್ರದೇಶ, ಗುಂಡಿಬೈಲು, ಬನ್ನಙಜೆ, ಬೈಲಕೆರೆ, ಮೂಡನಿಡಂಬೂರು, ಕೊಡವೂರು, ನಿಟ್ಟೂರು, ಕಲ್ಸಂಕ, ತೆಂಕಪೇಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ಕಂಡುಬಂದಿದ್ದು, ಅನೇಕ ಮನೆಗಳು ಜಲಾವೃತಗೊಂಡಿವೆ.
ಇಂದು ನೀರಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದ್ದು, ಕೂಡಲೇ ಮಾಹಿತಿ ತಿಳಿದ ಅಗ್ನಿಶಾಮಕ ದಳ ಹಾಗೂ ಉಡುಪಿ ನಗರಸಭೆ ಕಾರ್ಯಪಡೆ ಸ್ಥಳಕ್ಕಾಗಮಿಸಿ ಬೋಟ್ ಮೂಲಕ ಹಾಗೂ ಹಗ್ಗದ ಸಹಾಯದಿಂದ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಸ್ಥಳೀಯರೂ ಕೈಜೋಡಿಸಿದರು.
ನೆರೆಪೀಡಿತ ಪ್ರದೇಶಗಳಿಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್, ಎಸ್.ಪಿ ಅಕ್ಷಯ್ ಹಾಕೆ ಮಚ್ಚೀಂದ್ರ, ನಗರಸಭೆ ಪೌರಾಯುಕ್ತ ರಾಯಪ್ಪ ಸೇರಿದಂತೆ ಹಲವು ಅಧಿಕಾರಿಗಳು ತೆರಳಿ ರಕ್ಷಣಾ ಕಾರ್ಯದಲ್ಲಿ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ರಮೇಶ್ ಕಾಂಚನ್, ಕುಂಜಿಬೆಟ್ಟು ನಗರಸಭಾ ಸದಸ್ಯ ಗಿರೀಶ್ ಅಂಚನ್, ಮಾಜಿ ಸದಸ್ಯರಾದ ಶಶಿರಾಜ್ ಕುಂದರ್, ಆರ್.ಕೆ ರಮೇಶ್ ಪೂಜಾರಿ, ಶಿವಳ್ಳಿ ಗ್ರಾಮಲೆಕ್ಕಿಗ ಪ್ರಮೋದ್ ಹಾಗೂ ಪ್ರದೀಪ್ ಶೇರಿಗಾರ್, ಸುನಿಲ್ ಬೈಲಕರೆ, ಸಂದೇಶ್ ದೇವಾಡಿಗ, ಪ್ರಣಮ್, ಸುಹಾಸ್, ಸಂಪತ್, ರಾಘವೇಂದ್ರ ಹಾಗೂ ಸಂಜಯ್ ಆಚಾರ್ಯ ಮೊದಲಾದವರು ನೆರವು ನೀಡಿದರು.
ತೀವ್ರ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಈಗಾಗಲೇ ಉಡುಪಿ ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.